Thursday, September 19, 2024
Google search engine
Homeಮುಖಪುಟಜನಪರ ಚಿಂತಕ ಕೆ.ದೊರೈರಾಜು ಅವರಿಗೆ 75 ವರ್ಷ

ಜನಪರ ಚಿಂತಕ ಕೆ.ದೊರೈರಾಜು ಅವರಿಗೆ 75 ವರ್ಷ

ಎಚ್.ವಿ.ಮಂಜುನಾಥ್

ನಾನು ಅತ್ಯಂತ ಗೌರವಿಸುವ ವ್ಯಕ್ತಿಗಳೊಬ್ಬರಾದ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಕೆ. ದೊರೈರಾಜು ಅವರು ಇಂದು 75 ವರ್ಷಗಳ ಸಾರ್ಥಕ ವಸಂತಗಳನ್ನು ಪೂರೈಸಿದ್ದಾರೆ. ಅವರಿಗೆ ಎಪ್ಪತ್ತಾರನೇ ಜನ್ಮ ದಿನದ ಶುಭಾಶಯಗಳು.

1947 ರ ಜೂನ್ ಎಂಟರಂದು ಹುಟ್ಟಿದ ಅವರ ತಂದೆಯ ಹೆಸರು ಕದರಯ್ಯ. ಮೈಸೂರು ವಿಶ್ವವಿದ್ಯಾನಿಲಯದಿಂದ 1974 ರಲ್ಲಿ ಪ್ರಾಣಿಶಾಸ್ತ್ರದಲ್ಲಿ ಎಂ.ಎಸ್ಸಿ ಮಾಡಿ 1975 ರಿಂದ 1983 ರವರೆಗೆ ಜೀವಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಅನಂತರ ಪ್ರಾಚಾರ್ಯರಾದರು. ಆಮೇಲೆ ಲೋಕ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು, ಪ.ಪೂ.ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ ಮೇ 2005 ರಲ್ಲಿ ನಿವೃತ್ತಿ ಹೊಂದಿದರು.

1972 ರಲ್ಲಿ ದಲಿತ ಯುವಕ ಸಂಘಟನೆ ಮೂಲಕ ಹೋರಾಟದ ಬದುಕಿಗೆ ಕಾಲಿಟ್ಟ ಅವರು 1976 ರಲ್ಲಿ “ಹೆಂಡ ಬೇಡ, ಶಾಲೆ ಬೇಕು” ಹೋರಾಟ, ತುಮಕೂರಿನ ವಸತಿ ಹೀನ ದಲಿತರಿಗಾಗಿ ಅಂಬೇಡ್ಕರ್ ನಗರ ನಿರ್ಮಾಣಕ್ಕಾಗಿ ಹೋರಾಟ, ಮಂಡಿ ಹಮಾಲಿ, ನಗರಸಭೆ ಪೌರ ಕಾರ್ಮಿಕರ ಸಂಘಟನೆ ಮತ್ತು ಕ್ಷೇಮಾಭಿವೃದ್ಧಿಗಾಗಿ ಹೋರಾಟ, ರಾಜ್ಯದ ಅಲೆಮಾರಿ ಜನ ಸಮುದಾಯಗಳ ಜಾಗೃತಿ ಸಂಘಟನೆ ಮತ್ತು ಹೋರಾಟ ಮುಂತಾದವು ಅವರು ಮಾಡಿದ ಪ್ರಮುಖ ಹೋರಾಟಗಳು.

ಪಿ.ಯು. ಹಂತದ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಡ್ಡಾಯ ಇಂಗ್ಲೀಷ್ ಕಲಿಕೆಗೆ ಮನವೊಲಿಕೆ, ತರಬೇತಿ, ಶೈಕ್ಷಣಿಕ ಗುಣಮಟ್ಟ ಉತ್ತಮಪಡಿಸಲು ಕಾರ್ಯಕ್ರಮಗಳ ಯೋಜನೆ, ವಿವಿಧ ಕ್ಷೇತ್ರದ ಉಪನ್ಯಾಸಕರ ಬೋಧನಾ ಕೌಶಲ್ಯ ಕುರಿತಂತೆ ಕಾರ್ಯಾಗಾರ, ರಾಜ್ಯದ ವಿಜ್ಞಾನ ಕೇಂದ್ರದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಇದರ ಜೊತೆಗೆ ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಶಿರಾ ಇದರ ಅಧ್ಯಕ್ಷರಾಗಿ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳ ಯೋಜನೆ ಮತ್ತು ಕಾರ್ಯಾನುಷ್ಟಾನದಲ್ಲಿ ತೊಡಗಿಸಿಕೊಂಡಿರುವುದಲ್ಲದೆ ಪ್ರಚಲಿತ ವಿದ್ಯಮಾನಗಳಿಗೆ ಸದಾ ಪ್ರತಿಕ್ರಿಯಿಸುತ್ತ ಬರುತ್ತಿದ್ದಾರೆ.

ತಮ್ಮ ಸರಳತೆ, ಪ್ರಾಮಾಣಿಕತೆಯಿಂದ ಬೆರಗುಗೊಳಿಸಿ ನನ್ನಂತಹ ಅನೇಕರ ಪ್ರೀತಿ,ಗೌರವಕ್ಕೆ ಪಾತ್ರರಾಗಿರುವ ಅವರು ಯಾವತ್ತೂ ಒಣ ಬೌದ್ದಿಕತೆಯನ್ನು ಪ್ರದರ್ಶಿಸಿದವರಲ್ಲ. ವಯಸ್ಸಿನಲ್ಲಿ ಬಹಳ ಕಿರಿಯವನಾದ ನನ್ನನ್ನು ನನ್ನಂತವರನ್ನು ಅತ್ಯಂತ ಅಕ್ಕರೆ ಮತ್ತು ಗೌರವದಿಂದಲೇ ಮಾತನಾಡಿಸಿ ಅಗತ್ಯ ಸಂದರ್ಭಗಳಲ್ಲಿ ಬಹಳ ಸಂಕೋಚ ಮತ್ತು ಮುಜುಗರದಿಂದಲೇ ಮಾರ್ಗದರ್ಶನವನ್ನು ನೀಡುವ ವ್ಯಕ್ತಿ.

ತಮ್ಮ ಕ್ರಿಯಾಶೀಲತೆಯಿಂದ ಜೀವಂತಿಕೆ, ಜೀವನೋತ್ಸಾಹ ಕಾಪಾಡಿಕೊಂಡು ಬಂದಿರುವ ದೊರೈರಾಜು ಇತ್ತೀಚಿನ ದಿನಗಳಲ್ಲಿ ಉಳಿದಿರುವ ಬೆರೆಳೆಣಿಕೆಯಷ್ಟು ಅಪರೂಪದ ಮತ್ತು ಸಾಚಾ ವ್ಯಕ್ತಿತ್ವದ ವ್ಯಕ್ತಿಗಳೊಬ್ಬರು. ತಮ್ಮ ನಡವಳಿಕೆಯ ಮೂಲಕವೇ ನಮ್ಮ ನೈತಿಕ ಪ್ರಜ್ಞೆಯನ್ನು ಕಾಪಾಡುತ್ತಿರುವ ಆ ಹಿರಿಯ ಜೀವಕ್ಕೆ ಮತ್ತೊಮ್ಮೆ ಜನ್ಮದ ಶುಭಾಶಯಗಳು.

ಲೇಖಕರು ವಕೀಲರು, ಸಾಮಾಜಿಕ ಚಿಂತಕರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular