ನಾನು ಕಾನ್ವೆಂಟ್ ನಲ್ಲಿ ಓದಿದ್ದೇನೆ ಎಂದುಕೊಂಡರೂ ಅದರಲ್ಲಿ ತಪ್ಪೇನಿದೆ. ದಲಿತರು ಇಂಗ್ಲೀಷ್ ಕಲಿಯಬಾರದೇ? ಬಿಜೆಪಿಯವರಿಗೆ ಅವಲ ಮಲ ಹೊರುವ, ಕಾಲು ಒತ್ತುವ ಚರಂಡಿ ಸ್ವಚ್ಛ ಮಾಡುವ ದಲಿತರೆಂದರೆ ಪ್ರೀತಿಯೇ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.
ನಾನು ಬಸವಣ್ಣ, ಅಂಬೇಡ್ಕರ್, ನಾರಾಯಣಗುರು ಅವರ ತತ್ವ, ಸಂವಿಧಾನದ ಸಂದೇಶವನ್ನು ಅನುಸರಿಸುವ ದಲಿತ. ಇಂಗ್ಲೀಷ್ ಮಾತನಾಡುವ ದಲಿತ ಎಂದರೆ ನಿಮಗೆ ಸಮಸ್ಯೆಯೇ? ಈ ಸಮಸ್ಯೆ ನಿಮಗೆ ಮಾತ್ರವೇ ಅಥವಾ ಇಡೀ ನಿಮ್ಮ ಪಕ್ಷಕ್ಕೆ ಸಮಸ್ಯೆಯೇ ಎಂದು ಸಚಿವ ಸುನಿಲ್ ಕುಮಾರ್ ಅವರಿಗೆ ಕೇಳಿದ್ದಾರೆ.
ದಲಿತರು ಶಿಕ್ಷಣದಿಂದ ದೂರವಿದ್ದು ನಿಮ್ಮ ಚಾತುರ್ವರ್ಣದಲ್ಲಿ ಹೇಳಿರುವಂತೆ ಇರಬೇಕೆ? ಪ್ರತಾಪ್ ಸಿಂಹ, ಸುನಿಲ್ ಕುಮಾರ್ ಅವರು ಹೀಗೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
ನಾನು ನಿಮಗೆ ಸವಾಲು ಹಾಕುತ್ತೇನೆ. ಚಿಕಾಗೋದಿಂದ ಚಿತ್ತಾಪುರದವರೆಗೂ ನೀವು ಯಾವುದೇ ವೇದಿಕೆ ಸಜ್ಜ ಮಾಡಿ, ನೀವು ವಿಷಯ ಆಯ್ಕೆ ಮಾಡಿ ನಾನು ಆ ಬಗ್ಗೆ ಮಾತನಾಡುತ್ತೇನೆ. ಈ ಸವಾಲು ಸ್ವೀಕರಿಸಲು ಸಿದ್ದರಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ 2 ರೂ ಟ್ರೋಲ್ ಗಳು, ಬಾಡಿಗೆ ಭಾಷಣಕಾರರು, ನಿನ್ನೆ ಮೊನ್ನೆ ಸಂಸದರಾದವರು ನೆಹರು, ಮನಮೋಹನ್ ಸಿಂಗ್ ಅವರ ಬಗ್ಗೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವಾಗ ನಾನು ನಿಮ್ಮ ಮುಖ್ಯಮಂತ್ರಿ ಬಗ್ಗೆ ಮಾತನಾಡಬಾರದೇ ಎಂದಿದ್ದಾರೆ.
ಸುನಿಲ್ ಕುಮಾರ್ ಅವರೇ ನಾನು ಮಾಜಿ ಸಚಿವ, ವಿರೋಧ ಪಕ್ಷದ ಶಾಸಕ ಹಾಗೂ ವಕ್ತಾರ. ಸರ್ಕಾರ ಪ್ರಶ್ನಿಸುವ ಜವಾಬ್ದಾರಿ ನನ್ನ ಮೇಲಿದೆ. ನಾನು ಸಿಎಂ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದೇನಾ? ಬಿಟ್ ಕಾಯಿನ್, ಎಸ್.ಸಿ ಬೋರ್ವೆಲ್ ಹಗರಣದ ಬಗ್ಗೆ ಮಾತನಾಡುವುದು ತಪ್ಪಾ ಎಂದು ಕೇಳಿದ್ದಾರೆ.
ನಾವು ಕೇಳುವ ಸರಳ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರ ಇಲ್ಲ ಎಂದರೆ ನೀವು ವೈಯಕ್ತಿಕ ಟೀಕೆ ಮಾಡುತ್ತೀರ. ನೀವು ಎಷ್ಟೇ ವೈಯಕ್ತಿಕ ಟೀಕೆ ಮಾಡಿದರೂ ನಾನು ಪ್ರಶ್ನೆ ಮಾಡುವುದು ನಿಲ್ಲಿಸುವುದಿಲ್ಲ. ನೀವು ರಾಜ್ಯದ ಜನರಿಗೆ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.
ಕ್ವಿಟ್ ಇಂಡಿಯಾ ಚಳವಳಿ, ಉಪ್ಪಿನ ಸತ್ಯಾಗ್ರಹ, ದುಂದು ಮೇಜಿನ ಸಭೆ, ಅಂಬೇಡ್ಕರ್ ಅವರು ಸಂವಿಧಾನ ಲೋಕಾರ್ಪಣೆ ಮಾಡುವಾಗ ಆರ್.ಎಸ್.ಎಸ್ ಎಲ್ಲಿತ್ತು? ಸಂವಿಧಾನ ಸುಟ್ಟು ಮನುಸ್ಮೃತಿ ಸಂವಿಧಾನ ಆಗಬೇಕು ಎಂದು ಹೇಳಿದ್ದು ಯಾಕೆ? ರಾಷ್ಟ್ರಧ್ವಜ ಹಾರಿಸಲು 57 ವರ್ಷ ಸಮಯ ತೆಗೆದುಕೊಂಡಿದ್ದು ಯಾಕೆ? ಸುಭಾಷ್ ಚಂದ್ರಬೋಸ್ ಇಂಡಿಯನ್ ಆರ್ಮಿ ಕಟ್ಟುವಾಗ ನಿಮ್ಮ ನಿಲುವು ಏನಿತ್ತು. ಹೆಡಗೆವಾರ್ ಅವರು ರಾಷ್ಟ್ರಧ್ವಜ ಬಗ್ಗೆ ಏನು ಹೇಳಿದ್ದರು ಎಂದು ಕೇಳಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆಗಳು ಸುರಿಮಳೆಗೈದಿದ್ದಾರೆ.


