2021-22ನೇ ಸಾಲಿನ ಎಸ್ಎಸ್ಎಲ್.ಸಿ ಪರೀಕ್ಷಾ ಫಲಿತಾಂಶ ಮೇ 19ರಂದು ಪ್ರಕಟಗೊಂಡಿದ್ದು ಶೇಕಡ 85.63ರಷ್ಟು ಫಲಿತಾಂಶ ಹೊರಬಿದ್ದಿದೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ ಬಾರಿ ಎಸ್ಎಸ್ಎಲ್.ಸಿ ಪರೀಕ್ಷೆಯಲ್ಲಿ 85.63ರಷ್ಟು ಫಲಿತಾಂಶ ಹೊರಬಿದ್ದಿದೆ. ಈ ಬಾರಿ 7.38 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಹೇಳಿದ್ದಾರೆ.
2021-22ನೇ ಸಾಲಿನಲ್ಲಿ 8.53 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. ಈ ಪೈಕಿ 7.38 ಲಕ್ಷ ಮಂದಿ ವಿದ್ಯಾರ್ಥಿಗಳು ಪಾಸಾಗಿದ್ದಾರೆ. 145 ವಿದ್ಯಾರ್ಥಿಗಳು ಒಟ್ಟು ಅಂಕ 625ಕ್ಕೆ 625 ಅಂಕಗಳನ್ನು ಪಡೆದ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು.
ರಾಜ್ಯದ 277 ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಲಾಗಿತ್ತು. 52219 ಮಂದಿ ಶಿಕ್ಷಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿದ್ದರು.
ಈ ಬಾರಿಯೂ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ಮಕ್ಕಳೇ ಮೇಲುಗೈ ಸಾಧಿಸಿದ್ದು ಗಣನೀಯ ಸಾಧನೆ ಮಾಡಿದ್ದಾರೆ. ನಗರ ಪ್ರದೇಶದಲ್ಲಿ 86.64ರಷ್ಟು ಫಲಿತಾಂಶ ದಾಖಲಾಗಿದ್ದರೆ, ಗ್ರಾಮೀಣ ಪ್ರದೇಶದಲ್ಲಿ 91.32ರಷ್ಟು ಫಲಿತಾಂಶ ಪ್ರಕಟವಾಗಿದೆ.
ಶೇಕಡ 81.03 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, ಶೇ.90.29 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ. 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿರುವುದು ವಿಶೇಷವಾಗಿದೆ. ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಫಲಿತಾಂಶ ವಿದ್ಯಾರ್ಥಿಗಳಿಗೆ ಸಿಕ್ಕಿದೆ ಎಂದು ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.