ರಾಜ್ಯ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕದ ಮೇಲೆ ಪ್ರಹಾರ ನಡೆಸುತ್ತ ಬರುತ್ತಿದ್ದು, ಈ ಭಾಗಕ್ಕೆ 371ಜೆ ಅಡಿ ವಿಶೇಷ ಸ್ಥಾನಮಾನ ತಂದಿದ್ದರೂ ಉದ್ಯೋಗ, ಶಿಕ್ಷಣ ಹಾಗೂ ವಿಶೇಷ ಅನುದಾನ ನೀಡುವಲ್ಲಿ ಸರ್ಕಾರ ಸಂಪೂರ್ಣ ಕಡೆಗಣಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡಿಲ್ಲ. ರಾಜ್ಯದಲ್ಲಿ ಒಟ್ಟು 2.52 ಲಕ್ಷ ಹುದ್ದೆಗಳು ಖಾಲಿ ಇದ್ದು ಅದರಲ್ಲಿ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ ನೇರ ನೇಮಕಾತಿಗೆ 30 ಸಾವಿರ ಹುದ್ದೆಗಳು ಖಾಲಿ ಇವೆ. ಜೊತೆಗೆ ಹೊರಗೆ ಇರುವ ಲಕ್ಷ ಖಾಲಿ ಹುದ್ದೆಗಳಲ್ಲಿ ಶೇ.8ರಷ್ಟು ಸಿಗುತ್ತವೆ. ಹಾಗಾಗಿ ಒಟ್ಟು 50 ಸಾವಿರ ಹುದ್ದೆಗಳು ಖಾಲಿ ಇವೆ ಎಂದು ಹೇಳಿದರು.
ಹುದ್ದೆಗಳು ಖಾಲಿ ಇರುವ ಕಾರಣ ಆ ಭಾಗದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಈಗ ಸರ್ಕಾರವು ಉದ್ಯೋಗ ಭರ್ತಿ ಮಾಡುವಾಗ ಮೆರಿಟ್ ಆಧಾರದ ಮೇಲೆ ಆಯ್ಕೆ ಪಟ್ಟಿ ಸಿದ್ದಪಡಿಸಿಕೊಳ್ಳುವಾಗ ಮೊದಲು ಮಿಕ್ಕುಳಿದ ವೃಂದಗಳ ಆಯ್ಕೆ ಪಟ್ಟಿ ಸಿದ್ದಪಡಿಸಿ, ನಂತರ ಸ್ಥಳೀಯ ವೃಂದದ ಆಯ್ಕೆ ಪಟ್ಟಿ ಸಿದ್ದಮಾಡಬೇಕು ಎಂದು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಈ ಜನವಿರೋಧಿ ಸರ್ಕಾರ ಬಂದ ನಂತರ ಸುತ್ತೋಲೆ ಹೊರಡಿಸಿ ಕಲ್ಯಾಣ ಕರ್ನಾಟಕಕ್ಕೆ ಸಿಗುವ ಮೀಸಲಾತಿಯನ್ನು ತಲೆಕೆಳಗಾಗಿಸಿ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಈ ಸರ್ಕಾರದಲ್ಲಿ ನೇಮಕಾತಿ ಆಗುತ್ತಿಲ್ಲ. ಕೇವಲ ಲೂಟಿ ಭ್ರಷ್ಟಾಚಾರ ನಡೆಯುತ್ತಿದೆ. ಕೆಪಿಎಸ್.ಸಿ ವತಿಯಿಂದ 2019-204ಲ್ಲಿ 1 ಸಾವಿರ ಹುದ್ದೆಗಳಿಗೆ ಸಂದರ್ಶನ ಕರೆಯಲಾಗಿದ್ದು 2022ರಲ್ಲಿ ತಾತ್ಕಾಲಿಕ ಪಟ್ಟಿ ಘೋಷಣೆ ಮಾಡಿದೆ. ಅಂತಿಮ ಪಟ್ಟಿ ಪ್ರಕಟಿಸುವ ಮುನ್ನ ನಾವು ಅಭ್ಯರ್ಥಿಗಳು ಕೊಟ್ಟ ದೂರನ್ನು ಕೊಟ್ಟಿದ್ದೇವೆ. 2016ರ ಸುತ್ತೋಲೆಯಂತೆ ಆಯ್ಕೆ ಪಟ್ಟಿ ಪ್ರಕಟಿಸಬೇಕು ಎಂದು ನಮ್ಮ ಬೇಡಿಕೆ ಇಟ್ಟೆವು. ನಂತರ ಇದನ್ನು ಸರಿಪಡಿಸುವುದಾಗಿ ಹೇಳಿದರು. ಆದರೆ ಇದುವರೆಗೂ ಸರಿಪಡಿಸಿಲ್ಲ ಎಂದು ಟೀಕಿಸಿದರು.
ಒಂದೆಡೆ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ದೇವದುರ್ಗದಲ್ಲಿ ಕಾಲುವೆ ಆಧುನೀಕರಣ ಯೋಜನೆಯಲ್ಲಿ ಶಾಸಕರು ಹಾಗೂ ಮುಖ್ಯ ಇಂಜಿನಿಯರ್ ನಡುವಣ ಆಡಿಯೋ ಸಂಭಾಷಣೆ ಇಡೀ ರಾಜ್ಯ ಕೇಳಿದ್ದು ಶಾಸಕರೇ ಇಲ್ಲಿ 200 ಕೋಟಿ ನಕಲಿ ಬಿಲ್ ಸೃಷ್ಟಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ. ನೇಮಕಾತಿ ಹಗರಣ ಇಡೀ ದೇಶದಾದ್ಯಂತ ಸದ್ದು ಮಾಡಿದೆ. ವರ್ಗಾವಣೆ ದಂಧೆ, ಶಿಕ್ಷಣ ಇಲಾಖೆಯಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕದಿಂದ ಬೇರೆ ಬೇರೆ ಇಲಾಖೆಗಳಲ್ಲಿನ ನೇಮಕ ಬೇರೆಬೇರೆ ಇಲಾಖೆಗಳಲ್ಲಿನ ಯೋಜನೆಯಲ್ಲಿ 40ರಷ್ಟು ಕಮಿಷನ್ ಆರೋಪವನ್ನು ಕೇಳಿದ್ದೇವೆ ಎಂದರು.
ಇವರ ಭ್ರಷ್ಟಾಚಾರಕ್ಕೆ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದು ಕಿಂಚಿತ್ ನೈತಿಕತೆ ಇದ್ದರೆ ಭ್ರಷ್ಟಾಚಾಋ ತಡೆಯಲು ಇಚ್ಛಾಶಕ್ತಿ ಇದ್ದರೆ ಬಿಬಿಎಂಪಿ ಸೇರಿ ಎಲ್ಲಾ ಹಗರಣಗಳನ್ನು ಹೈಕೋರ್ಟ್ ನ್ಯಾಯಾಧೀಶರ ತನಿಖಾ ತಂಡದಿಂದ ಪಾರದರ್ಶಕವಾಗಿ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.


