ಆಂಧ್ರಪ್ರದೇಶದ ಕಾಕಿನಾಡದಿಂದ ಆಗ್ನೇಯಕ್ಕೆ ಸುಮಾರು 300 ಕಿ.ಮೀ ದೂರದ ಬಂಗಾಳಕೊಲ್ಲಿಯಲ್ಲಿ ಅಸಾನಿ ಹೆಸರಿನ ತೀವ್ರ ಸ್ವರೂಪದ ಚಂಡಮಾರುತ ಅಪ್ಪಳಿಸುತ್ತಿದ್ದು ಮೇ 10ರ ನಂತರ ಕ್ರಮೇಣ ದುರ್ಬಲಗೊಳ್ಳುವ ಸೂಚನೆಯ ನಡುವೆ ಗಂಟೆಗೆ 105 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ರಾಜ್ಯದಲ್ಲಿ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ತೀವ್ರ ಚಂಡಮಾರುತವು ಈಗಾಗಲೇ ತೀವ್ರತೆಯ್ನು ಕಳೆದುಕೊಳ್ಳಲು ಪ್ರಾರಂಭಿಸಿದೆ. ಮುಂದಿನ 24 ಗಂಟೆಗಳಲ್ಲಿ ಇದು ಮತ್ತಷ್ಟು ದುರ್ಬಲಗೊಳ್ಳುತ್ತದೆ. ಇದು ಕರಾವಳಿಯನ್ನು ಸಮೀಪಿಸುತ್ತಿದ್ದು ಮರುಕಳಿಸುವಂತೆ ಮಾಡುತ್ತದೆ ಎಂದು ಭುವನೇಶ್ವರದ ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕ ಎಚ್.ಆರ್.ಬಿಸ್ವಾಸ್ ಹೇಳಿಕೆಯನ್ನು ಉಲ್ಲೇಖಿಸಿ ದಿ ವೈರ್.ಕಾಮ್ ವರದಿ ಮಾಡಿದೆ.
ಮಂಗಳವಾರ ರಾತ್ರಿ ವೇಳೆಗೆ ಗಾಳಿಯ ವೇಗ ಗಂಟೆಗೆ 80-90 ಕಿ.ಮೀ ಮತ್ತು ಬುಧವಾರ ಸಂಜೆ ವೇಳೆಗೆ 60-70 ಕಿ.ಮೀ.ಗೆ ಇಳಿಯಲಿದೆ ಎಂದು ಅವರು ಹೇಳಿದ್ದಾರೆ.
ಒಡಿಶಾ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೇ 12 ಗುರುವಾರದವರೆಗೆ ಆಳ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಮಂಗಳವಾರ ಬೆಳಗ್ಗೆ ಗಂಜಾಂ, ಪುರಿ ಮತ್ತು ಖುರ್ದಾದಲ್ಲಿ ಮಳೆ ದಾಖಲಾಗಿದೆ.
ಈ ಮಧ್ಯೆ ಚಂಡಮಾರುತದಿಂದಾಗಿ ಹೈದರಾಬಾದ್, ವಿಶಾಖಪಟ್ಟಣಂ, ಜೈಪುರ ಮತ್ತು ಮುಂಬೈ ಸೇರಿ ಹತ್ತು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಚೆನ್ನೈನ ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ ಎಂದು ಹಿಂದೂಸ್ತಾನ ಟೈಮ್ಸ್ ವರದಿ ಮಾಡಿದೆ.
ವರದಿ ಪ್ರಕಾರ ಚಂಡಮಾರುತದಿಂದಾಗಿ ಒರಟಾದ ಸಮುದ್ರದಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಸಿಲುಕಿಕೊಂಡಿದ್ದ ಒಡಿಶಾದ ಕನಿಷ್ಟ 11 ಮೀನುಗಾರರನ್ನು ಸೋಮವಾರ ಭಾರತೀಯ ಕೋಸ್ಟ್ ಗಾರ್ಡ ರಕ್ಷಿಸಿದೆ. ಮೀನುಗಾರಿಕೆ ದೋಣಿ ಖರೀದಿಸಲು ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ತೆರಳಿದ್ದ ಅವರು ಅಲ್ಲಿಂದ ವಾಪಸ್ಸಾಗುತ್ತಿದ್ದಾಗ ಹೊಸದಾಗಿ ಖರೀದಿಸಿದ್ದ ಹಡಗಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಗಂಜಾಂ ಜಿಲ್ಲೆಯ ಸೋನಾಪುಟ್ ಬಳಿಯ ಕರಾವಳಿ ತೀರದಿಂದ 4-5 ಕಿ.ಮೀ.ದೂರದ ಸಮುದ್ರದಲ್ಲಿ ಸಿಲುಕಿಕೊಂಡಿದ್ದರು ಎಂದು ದಿ ವೈರ್ ವರದಿ ಮಾಡಿದೆ.
ಗಂಜಾಂ ಜಿಲ್ಲಾಡಳಿತವು ಗೋಪಾಲ್ ಪುರ ಸೇರಿದಂತೆ ಎಲ್ಲಾ ಬೀಚ್ ಗಳನ್ನು ಪ್ರವಾಸಿಗರಿಗೆ ಎರಡು ದಿನಗಳ ಕಾಲ ಮುಚ್ಚಿದೆ. ಮಂಗಳವಾರ ಸಮುದ್ರದಲ್ಲಿ ಅಲೆಗಳು ಭಾರೀ ಪ್ರಮಾಣದಲ್ಲಿ ಕಂಡುಬರುವ ಸಾಧ್ಯತೆ ಇದ್ದು ಮೇ 12ರ ನಂತರ ಸುಧಾರಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಚಂಡಮಾರುತದ ಪ್ರಭಾವದ ಅಡಿಯಲ್ಲಿ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಸೋಮವಾರ ಭಾರೀ ಮತ್ತು ಸಾಧಾರಣ ಮಳೆಯಾಗಿದೆ.