Saturday, October 19, 2024
Google search engine
Homeಮುಖಪುಟಬಸವ ಜಯಂತಿ - ಅಲ್ಲಮಪ್ರಭು ವಚನದ ಬೆಳಕಿನಲ್ಲಿ ಮಠಗಳು - ವಡ್ಡಗೆರೆ ನಾಗರಾಜಯ್ಯ ವಿಶ್ಲೇಷಣೆ

ಬಸವ ಜಯಂತಿ – ಅಲ್ಲಮಪ್ರಭು ವಚನದ ಬೆಳಕಿನಲ್ಲಿ ಮಠಗಳು – ವಡ್ಡಗೆರೆ ನಾಗರಾಜಯ್ಯ ವಿಶ್ಲೇಷಣೆ

ಮಠವೇಕೋ ಪರ್ವತವೇಕೋ,

ಚಿತ್ತ ಸಮಾಧಾನವುಳ್ಳ ಶರಣಂಗೆ

ಮತ್ತೆ ಹೊರಗಣ ಚಿಂತೆ

ಧ್ಯಾನ ಮೌನ ಜಪತಪವೇಕೋ

ತನ್ನ ತಾನರಿದ ಶರಣಂಗೆ ಗುಹೇಶ್ವರಾ?!

ಅನುಭವ ಮಂಟಪದ ಪ್ರಥಮ ಪೀಠಾಧ್ಯಕ್ಷನೂ ಶೂನ್ಯ ಸಿಹಾಸನಾಧೀಶನೂ ಅನುಭಾವಿ ಕವಿಯೂ ಆದ ಅಲ್ಲಮಪ್ರಭು ಈ ಮೇಲಿನ ವಚನದಲ್ಲಿ ಮಠ ಸ್ಥಾಪನೆಯ ಸಂಸ್ಕೃತಿಯನ್ನು ಅಲ್ಲಗಳೆಯುತ್ತಾನೆ. ಬಸವಣ್ಣು ‘ದೇಹವೇ ದೇಗುಲ’ ಎಂದು ಹೇಳಿದ್ದಕ್ಕೆ ಪೂರಕವಾಗಿ ಸ್ಥಾವರ ರೂಪಿಯಾದ ಮಠವನ್ನು ನಿರ್ಮಿಸುವುದನ್ನು ಅಲ್ಲಮಪ್ರಭು ನಿರಾಕರಿಸುತ್ತಾನೆ. ದೇವಾಲಯಗಳನ್ನು ಬೆಟ್ಟಗುಡ್ಡಗಳಲ್ಲಿ ನಿರ್ಮಿಸಿ ಬರಿದೇ ಜಪತಪಕ್ಕೆಂದು ಪರ್ವತಕ್ಕೆ ಹೋಗುವಿಕೆಯನ್ನು ಕೂಡ ಅಲ್ಲಮಪ್ರಭು ಒಪ್ಪುವುದಿಲ್ಲ. ಹೀಗೆಂದಾಗ ಲಿಂಗಾಯತ ಧರ್ಮವು ಮಠ ಮತ್ತು ದೇಗುಲ ನಿರ್ಮಾಣದ ಸಂಸ್ಕೃತಿಯನ್ನು ಅತ್ಯಂತ ಸ್ಪಷ್ಟವಾಗಿ ನಿರಾಕರಿಸುತ್ತದೆ.

ಬಸವೋತ್ತರ ನಂತರದ ಕಾಲದಲ್ಲಿ ಮಠ ಮತ್ತು ದೇಗುಲ ನಿರ್ಮಾಣ ಸಂಸ್ಕೃತಿಯು ಲಿಂಗಾಯತಕ್ಕೆ ಹೊರಗಿನಿಂದ ಹೇರಲಾದ ಸಾಂಸ್ಥಿಕ ಪರಿಕಲ್ಪನೆಯಾಗಿರುತ್ತದೆ. ಲಿಂಗಾಯತ ವಿರಕ್ತ ಮಠಗಳ ಸ್ಥಾಪನೆಯ ಹಿಂದಿನ ಅಸಲಿ ಕಾರಣಗಳನ್ನು ನಾವು ಈ ರೀತಿಯಲ್ಲಿ ಶೋಧಿಸಿ ವಿವರಿಸಿಕೊಳ್ಳುವ ಅಗತ್ಯವಿದೆ.

ಬ್ರಾಹ್ಮಣ ಮತ್ತು ಲಿಂಗಿಬ್ರಾಹ್ಮಣರೆನ್ನಿಸಿದ ವೀರಶೈವರ ಮಠನಿರ್ಮಾಣ ಸಂಸ್ಕೃತಿಯು ವೇದಪ್ರಾಮಾಣ್ಯವನ್ನು ನಿರಾಕರಿಸಿದ ಲಿಂಗಾಯತದೊಳಕ್ಕೆ ತೂರಿಕೊಂಡು ಬಂದ ನಂತರದಲ್ಲಿ ಬಸವತತ್ವವು ಕೂಡ ಸಾಂಸ್ಥಿಕ ರೂಪಧಾರಣೆ ಮಾಡಿಕೊಂಡು ಲಿಂಗಾಯತ ಧರ್ಮವು ಜಾತಿಯ ಹಂತಕ್ಕೆ ಕುಗ್ಗಿತು. ಹೀಗೆ ಕುಗ್ಗಿಸಿದ ಪಾತಾಳ ಗರಡಿಯೇ ವೇದಪ್ರಾಮಾಣ್ಯವನ್ನು ಒಪ್ಪಿಕೊಂಡ ವೀರಶೈವದ ಸಿದ್ಧಾಂತ ಶಿಖಾಮಣಿ ಎಂಬ ಸಂಸ್ಕೃತದ ಶಾಸ್ತ್ರಗ್ರಂಥ.

ವೀರಶೈವ ಪಂಚಾಚಾರ್ಯರು ಲಿಂಗಾಯತರಿಗೆ ಗುರುಸ್ಥಾನ ಅಲಂಕರಿಸಿ ಬಸವಣ್ಣನನ್ನು ಹೊರಗಿಟ್ಟು ತಾವೇ ಭೂಸುರರಾಗಿ ಲಿಂಗಾಯತ ಜಾತಿಯ ಪ್ರತಿಯೊಂದು ಉಪಜಾತಿಗಳಿಗೂ ಮಠಗಳನ್ನು ಸ್ಥಾಪಿಸುವ ಮೂಲಕ ಪರೋಪಜೀವಿಗಳಾಗಿ ಅನಾಯಸವಾಗಿ ಬದುಕತೊಡಗಿದರು. ಅನುತ್ಪಾದಕ ವೀರಶೈವರು ಉತ್ಪಾದಕ ಶ್ರಮಜೀವಿಗಳಾದ ಲಿಂಗಾಯತರನ್ನು ಶೋಷಿಸಿದ ಬಗೆ ಇದು. ವೀರಶೈವ ಪಂಚಾಚಾರ್ಯರು ಅಡ್ಡಪಲ್ಲಕ್ಕಿ ಮೇನೆಗಳ ಮೇಲೆ ಮರೆಯುವ ಭೂಸುರರೇ ಹೊರತು ಬೆವರು ಸುರಿಸಿ ದುಡಿಯುವ ಲಿಂಗಾಯತರ ಪಾಲಿನ ಉದ್ಧಾರಕರಲ್ಲ.

ಲಿಂಗಾಯತರು ಈ ಕಠೋರ ಸತ್ಯವನ್ನು ಅರ್ಥ ಮಾಡಿಕೊಳ್ಳುವುದು ಯಾವಾಗ?

ಅಂತಹ ಅನುಭಾವಿ ಕವಿ ಅಲ್ಲಮಪ್ರಭು ಮಠದ ಪರಿಕಲ್ಪನೆಯನ್ನು ಅಲ್ಲಗೆಳೆಯುವುದರ ಹಿಂದೆ ಬ್ರಾಹ್ಮಣ ಮತ್ತು ಲಿಂಗಿಬ್ರಾಹ್ಮಣ ವೀರಶೈವವು ಮಠ ಸ್ಥಾಪನೆಯ ಮೂಲಕ ಲಿಂಗಾಯತಕ್ಕೆ ಬಂಗವುಂಟುಮಾಡುವ ಅಸ್ವಸ್ಥತೆಯನ್ನು ಗುರುತಿಸಿದ್ದಾನೆಂದ ಮೇಲೆ ಲಿಂಗಾಯತರು ಮಠಗಳಿಗೆ ಜೋತುಬೀಳುವುದರಲ್ಲಿ ಯಾವುದೇ ಅರ್ಥವಿಲ್ಲ.

ಡಾ.ವಡ್ಡಗೆರೆ ನಾಗರಾಜಯ್ಯ, ಸಾಹಿತಿಗಳು, ಚಿಂತಕರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular