ಮನುಷ್ಯ ಪ್ರೀತಿ, ಸಂತೋಷದಿಂದ ಬದುಕುವಂತಾಗಬೇಕು. ಧರ್ಮದ ಹೆಸರಿನಲ್ಲಿ ನಡೆಯುವ ದ್ವೇಷ ಸರಿಯಲ್ಲ ಎಂದು ಜನಪರ ಚಿಂತಕ ಕೆ.ದೊರೈರಾಜ್ ಹೇಳಿದರು.
ತುಮಕೂರಿನ ಎನ್.ಕಾಲೋನಿಯ ಸಮುದಾಯ ಭವನದಲ್ಲಿ ಕೋತಿತೋಪು, ಎನ್.ಆರ್.ಕಾಲೋನಿಯ ದಲಿತ ಸೌಹಾರ್ದ ಒಕ್ಕೂಟದಿಂದ ಮುಸ್ಲೀಂ ಬಾಂಧವರಿಗೆ ಹಮ್ಮಿಕೊಂಡಿದ್ದ ಇಫ್ತಾರ್ ಕೂಟದಲ್ಲಿ ಅವರು ಮಾತನಾಡಿದರು. ರಂಜಾನ್ ಉಪವಾಸ ಉತ್ತಮ ಸಂದೇಶವನ್ನು ನೀಡುತ್ತದೆ. ಎಲ್ಲರೂ ಸೌಹಾರ್ದತೆಯಿಂದ ಬದುಕುವುದನ್ನು ಹೇಳುತ್ತದೆ ಎಂದು ತಿಳಿಸಿದರು.
ಮನುಷ್ಯ ಮನೋವಿಕಲ್ಪಗಳನ್ನು ಕಳೆದುಕೊಳ್ಳಬೇಕು. ಶಾಂತಿ ಮತ್ತು ಪ್ರೀತಿ ಇರುವ ಕಡೆ ಜೀವ ಹುಟ್ಟುತ್ತದೆ. ಬದುಕು ಅರಳುತ್ತದೆ. ದ್ವೇಷ ಇರುವ ಕಡೆದ ಎಲ್ಲವೂ ನಾಶವಾಗುತ್ತದೆ. ಜಗತ್ತು ನಿಂತಿರುವುದು ಪ್ರೀತಿ ಮತ್ತು ಶಾಂತಿಯ ಮೇಲೆ. ಇದನ್ನು ಅರ್ಥಮಾಡಿಕೊಂಡು ಜೀವನ ನಡೆಸಿದರೆ ಜನರು ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದರು.

ಶಾಂತಿ ಮತ್ತು ಪ್ರೀತಿ ಇದ್ದಕೆ ಬಾಂಧವ್ಯ ಗಟ್ಟಿಗೊಳ್ಳುವುದು. ಆದ್ದರಿಂದ ಪ್ರೀತಿಯಿಂದ ಒಗ್ಗೂಡಿ ಬದುಕಬೇಕು ಎಂಬ ಕಾರಣಕ್ಕೆ ಎಲ್ಲರೂ ಸ್ಪಂದಿಸಬೇಕಾಗಿದೆ. ಒಳ್ಳೆಯ ಕೆಲಸ ಮಾಡುವವರನ್ನು ಗೌರವಿಸಬೇಕು. ಪ್ರೀತಿ ಮತ್ತು ಶಾಂತಿಯಿಂದ ಬದುಕುವುದರಿಂದ ಎಲ್ಲರಿಗೂ ಮಾದರಿಯಾಗುತ್ತೇವೆ. ಒಳ್ಳೆಯದನ್ನು ಕಲಿಸುವುದು ಧರ್ಮ ಎನ್ನುತ್ತೇವೆ. ದ್ವೇಷವನ್ನು ಧರ್ಮ ಎಂದು ಕರೆಯುವುದಿಲ್ಲ ಎಂದು ಹೇಳಿದರು.
ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ ಹಿಂದೂ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು ಒಳ್ಳೆಯದನ್ನೇ ಸಾರುತ್ತವೆ. ಒಳ್ಳೆಯ ಮಾರ್ಗದಲ್ಲಿ ನಡೆಯುವಂತೆ ಬೋಧಿಸುತ್ತವೆ. ಹಾಗಾಗಿ ಹಿಂದೂ, ಕ್ರಿಶ್ಚಿಯನ್ ಮತ್ತು ಮುಸ್ಲೀಮರು ಒಂದೇ ತಾಯಿಯ ಮಕ್ಕಳಂತೆ ಬದುಕು ನಡೆಸಬೇಕು ಎಂದು ಕರೆ ನೀಡಿದರು.
ಸಮಾಜದಲ್ಲಿ ಕೆಲವು ಜನರು ಮಾತ್ರ ವಾತಾವರಣವನ್ನು ಕಡೆಸುತ್ತಿದ್ದಾರೆ. ಆದ್ದರಿಂದ ಇಂತಹ ಕಾರ್ಯಕ್ರಮಗಳ ಮೂಲಕ ಎಲ್ಲಾ ಧರ್ಮದ ಜನರೂ ಒಂದಾಗಿ ಬಾಳುತ್ತೇವೆ ಎಂದು ಉತ್ತರ ನೀಡಬೇಕು. ಸಮಾಜವನ್ನು ಛಿದ್ರಗೊಳಿಸುವ ಶಕ್ತಿಗಳಿಗೆ ಪ್ರೀತಿಯಿಂದಲೇ ಉತ್ತರ ನೀಡಬೇಕಾಗಿದೆ ಎಂದರು.
ಪ್ರತಿಯೊಂದು ಧರ್ಮವೂ ಶಾಂತಿಯನ್ನು ಸಾರುತ್ತವೆ. ಶಾಂತಿಯಿಂದ ಎಲ್ಲರೂ ಬದುಕುವಂತೆ ಹೇಳುತ್ತವೆ. ಕ್ರಿಶ್ಚಿಯನ್ ಧರ್ಮ ನಿನ್ನ ನೆರೆಯವರನ್ನು ನಿನ್ನಂತೆಯೇ ಪ್ರೀತಿ ಎಂದು ಹೇಳುತ್ತದೆ. ಹಾಗಾಗಿ ಇಸ್ಲಾಂ ಧರ್ಮ ಅಕ್ಕಪಕ್ಕದ ಮನೆಯವರು ಹಸಿದಿದ್ದರೆ ಆ ಹಸಿವನ್ನು ತಣಿಸುವಂತೆ ಹೇಳುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಸ್ಲಂ ಜನಾಂದೋಲನ ಸಂಚಾಲಕ ನರಸಿಂಹಮೂರ್ತಿ, ಸಮಾಜ ಸೇವಕ ತಾಜುದ್ದೀನ್ ಶರೀಫ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಕಾರ್ಮಿಕ ಮುಖಂಡ ಮುಜೀಬ್, ದಲಿತ ಸಂಘರ್ಷ ಸಮಿತಿಯ ಮುಖಂಡ ನರಸಿಂಹಯ್ಯ ಮೊದಲಾದವರು ಇದ್ದರು.


