ಧರ್ಮ ರಾಜಕಾರಣದ ಹಸು ಬರಡಾಗುತ್ತಿರುವುದನ್ನು ಕಂಡ ಬಿಜೆಪಿ ನಾಯಕರು ಈಗ ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೆ ಕೈ ಹಾಕಿದ್ದಾರೆ. ಈ ಸ್ವಾರ್ಥ ರಾಜಕಾರಣಕ್ಕೆ ಸ್ವಾಭಿಮಾನಿ ಕನ್ನಡಿಗರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಭಾಷೆ, ಪ್ರದೇಶಗಳ ನಮ್ಮ ನೀತಿ-ನಿಲುವು ಜಯಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಎನ್ನುವ ಕುವೆಂಪು ಅವರ ಕವಿ ನುಡಿಯಿಂದ ಪ್ರೇರಿತವಾದುದು. ಕನ್ನಡ ಭಾಷೆ ನಮಗೆ ರಾಜಕಾರಣದ ಆಯುಧ ಅಲ್ಲ. ಇದು ನಮ್ಮ ಜೀವದ ಉಸಿರು. ಇಂಗ್ಲೀಷ್, ಹಿಂದಿ ಎಲ್ಲ ಭಾಷೆಗಳ ಬಗ್ಗೆ ನಮಗೆ ಗೌರವ ಇದೆ. ಇವೆಲ್ಲವೂ ಬೇಕು. ಈ ಭಾಷೆಗಳ ಮೂಲಕ ಹರಿದು ಬರುವ ಜ್ಞಾನದ ಅಮೃತವೂ ಬೇಕು. ಆದರೆ ಕನ್ನಡಕ್ಕೆ ಮೊದಲ ಆದ್ಯತೆ, ಮಾತೃಭಾಷೆಗೆ ಮೊದಲ ಪೂಜೆ ಎಂದು ಭಾಷಾ ಸಾಮರಸ್ಯ ಮತ್ತು ಕನ್ನಡದ ಅಗತ್ಯತೆಯನ್ನು ಪ್ರತಿಪಾದಿಸಿದ್ದಾರೆ.
ನಮ್ಮದು ಒಕ್ಕೂಟ ವ್ಯವಸ್ಥೆಯ ದೇಶ. ರಾಜ್ಯಗಳು ಭಾಷೆಯ ಆಧಾರದಲ್ಲಿ ರಚನೆಯಾಗಿವೆ. ಭಾಷಾವಾರು ಪ್ರಾಂತ್ಯದಲ್ಲಿ ಪ್ರಾದೇಶಿಕ ಭಾಷೆಯನ್ನು ಮನ್ನಿಸಬೇಕಾಗುತ್ತದೆ. ಕನ್ನಡ ನಮಗೆ ಮಾತೃಭಾಷೆಯೂ ಹೌದು, ಪರಿಸರದ ಭಾಷೆಯೂ ಕೂಡ ಆಗಿದೆ ಎಂದಿದ್ದಾರೆ.
ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ. ಪ್ರತಿಯೊಂದು ರಾಜ್ಯಭಾಷೆಯೂ ನಮ್ಮ ರಾಷ್ಟ್ರಭಾಷೆ. ನೆಲದ ಸಾರ್ವಭೌಮ ಭಾಷೆ. ಇದನ್ನೂ ಸಂವಿಧಾನವೂ ಅಂಗೀಕರಿಸಿದೆ. ಸಂವಿಧಾನವನ್ನೇ ವಿರೋಧಿಸುವ ದೇಶದ್ರೋಹಿಗಳಿಗೆ ಈ ಸಾಮಾನ್ಯ ಜ್ಞಾನದ ಅರಿವಿರಲಿ ಎಂದು ಸಲಹೆ ನೀಡಿದ್ದಾರೆ.
ಮಾತೃಭಾಷೆ ಎನ್ನುವುದು ಕೇವಲ ವರ್ಣಮಾಲೆ ಅಲ್ಲ. ಮಾತೃಭಾಷೆ ಎಂದರೆ ನಮ್ಮ ಭಾವನೆ, ಸಂಬಂಧ, ತನ್ನತನದ ಪ್ರಜ್ಞೆ, ಸಂಸ್ಕೃತಿ, ಇತಿಹಾಸ, ನೆಲ, ಜಲ, ಸಂಪತ್ತು ಎಲ್ಲವನ್ನೂ ಒಳಗೊಂಡ ಅಸ್ಮಿತೆ. ಇದು ಕನ್ನಡವನ್ನು ತುಳಿದು ಹಿಂದಿ ಹೇರಲು ಹೊರಟಿರುವ ಮೂರ್ಖರಿಗೆ ತಿಳಿಸಿದರಲಿ ಎಂದು ವ್ಯಂಗ್ಯವಾಡಿದ್ದಾರೆ.
ಹಿಂದಿ ಭಾಷೆಯ ವಕಾಲತು ಮಾಡಲು ಹೊರಟಿರುವ ಸಿ.ಟಿ.ರವಿ, ಮುರುಗೇಶ್ ನಿರಾಣಿ, ರಮೇಶ್ ಜಿಗಜಿಣಗಿ ಮೊದಲಾದವರಿಗೆ ಆ ಭಾಷೆಯ ಬಗ್ಗೆಯೂ ಪ್ರೀತಿ ಇಲ್ಲ. ಇವರೆಲ್ಲ ತಮ್ಮ ದೆಹಲಿ ದೊರೆಗಳನ್ನು ಓಲೈಸಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂದಿ ಪರ ವಕಾಲತು ಮಾಡಿದ ಕೂಡಲೇ ರಾಜ್ಯದ ಬಿಜೆಪಿ ನಾಯಕರು ಅವರನ್ನು ಓಲೈಸಲು ಸಾಲಲ್ಲಿ ನಿಂತಿದ್ದಾರೆ. ಬಿಜೆಪಿ ನಾಯಕರೇ ಅಮಿತ್ ಶಾ ಅವರ ಗುಲಾಮರಾಗಬೇಡಿ, ಕನ್ನಡ ತಾಯಿಯ ಸ್ವಾಭಿಮಾನಿ ಮಕ್ಕಳಾಗಿ ಎಂದು ಸಲಹೆ ನೀಡಿದ್ದಾರೆ.
ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗಿ ನಾನು ರಾಜಕೀಯ ಜೀವನ ಪ್ರಾರಂಭಿಸಿದವನು. ನಾನು ಇಂದು, ಮುಂದು, ಎಂದೆಂದು ಒಬ್ಬ ಕನ್ನಡದ ಕಾವಲುಗಾರ. ಕಳ್ಳರ ಜೊತೆ ಶಾಮೀಲಾಗುವ ಡೋಂಗಿ ಚೌಕಿದಾರ ಅಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಬಹುಧರ್ಮ, ಬಹುಭಾಷೆ, ಬಹುಸಂಸ್ಕೃತಿಗಳನ್ನೊಳಗೊಂಡ ಬಹುತ್ವವನ್ನು ಒಪ್ಪಿಕೊಂಡ, ಅಪ್ಪಿಕೊಂಡ ಪಕ್ಷ. ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿಯನ್ನು ಹೇರುವುದು ಜನವಿರೋಧಿ ಮಾತ್ರವಲ್ಲ, ಸಂವಿಧಾನ ವಿರೋಧಿ ಕೂಡಾ ಆಗಿದೆ. ಕನ್ನಡವನ್ನು ತುಳಿದು ಹಿಂದಿ ಹೇರಲು ಹೊರಟಿರುವ ಬಿಜೆಪಿ ನಾಯಕರ ಕುತಂತ್ರದ ರಾಜಕಾರಣವನ್ನು ಸ್ವಾಭಿಮಾನಿ ಕನ್ನಡಿಗರೆಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ ನಮ್ಮೆದುರಿಗೆ ಗೋಕಾಕ್ ಹೊರಾಟದ ಮಾದರಿ ಇದೆ ಎಂದು ಹೋರಾಟದ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ನಮ್ಮ ಚಂದನವನದ ಕನ್ನಡ ಚಿತ್ರಗಳು, ಬಾಲಿವುಡ್ ಚಿತ್ರಗಳಿಗೆ ಸೆಡ್ಡು ಹೊಡೆದು ರಾಷ್ಟ್ರಮಟ್ಟದಲ್ಲಿ ಯಶಸ್ಸು ಕಾಣುವುದನ್ನು ಸಹಿಸದ ಹಿಂದಿ ಚಿತ್ರನಟರು ಕನ್ನಡದ ವಿರುದ್ಧ ನಂಜು ಕಾರುತ್ತಿದ್ದಾರೆ. ಕನ್ನಡ ಚಿತ್ರರಂಗ ಇದಕ್ಕೆ ಒಕ್ಕೊರಲಿನ ಉತ್ತರ ನೀಡಬೇಕಾಗಿದೆ ಎಂದು ಹೇಳಿದ್ದಾರೆ.


