ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಿ ಸೋತಿದ್ದರೂ ನಾನು ಮನೆಯಲ್ಲಿ ಕೂತಿಲ್ಲ. ಮತ್ತೆ ತುಮಕೂರಿನಿಂದಲೇ ಸ್ಪರ್ಧೆಗೆ ಇಳಿಯುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ತುಮಕೂರು ತಾಲ್ಲೂಕು ಗ್ರಾಮಾಂತರ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ದೇವೇಗೌಡ ನಾನು 2018ರಲ್ಲೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿದೆ. ಆಗ ಸೋನಿಯಾ ಗಾಂಧಿ ಸೇರಿದಂತೆ ಬೇರೆ ನಾಯಕರು ನನ್ನ ಮೇಲೆ ಒತ್ತಡ ತಂದೆ ರಾಜಕೀಯ ನಿವೃತ್ತಿ ಘೋಷಿಸದಂತೆ ತಡೆದರು ಎಂದು ತಿಳಿಸಿದರು.
ಹಲವು ನಾಯಕರ ಒತ್ತಡದ ಮೇಲೆ ನಾನು ರಾಜ್ಯಸಭೆಗೆ ಹೋದೆ. ರಾಜಕೀಯ ಕುತಂತ್ರ ಮತ್ತು ಅಪಪ್ರಚಾರದಿಂದ ತುಮಕೂರಿನಲ್ಲಿ ಸೋಲು ಕಾಣಬೇಕಾಯಿತು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ನಾನು 40ರಷ್ಟು ಕಮಿಷನ್ ಪಡೆದಿದ್ದರೆಏ ಹಣ ಕೊಟ್ಟು ಮತ ಪಡೆಯಬಹುದಿತ್ತು. ನಾನು ಹಾಗೆ ಮಾಡಲಿಲ್ಲ. ಜನರಿಗಾಗಿ ದುಡಿದಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಮತ ಮಾರಾಟಕ್ಕೆ ಇಲ್ಲ, ಎಂದು ಪ್ರತಿಯೊಬ್ಬರು ತಮ್ಮ ಬಡಾವಣೆಯಲ್ಲಿ ಫಲಕ ಹಾಕಬೇಕು. ಈ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಉತ್ತರ ನೀಡಬೇಕು ಎಂದರು.
ಮುಂದಿನ ಚುನಾವಣೆಯಲ್ಲಿ ಬಹುಮತದೊಂದಿಗೆ ಜಾತ್ಯತೀತ ಜನತಾ ದಳಿ ಸರ್ಕಾರ ರಚನೆ ಮಾಡಿದರೆ ಉದ್ಯೋಗ, ಆರೋಗ್ಯ, ಶಿಕ್ಷಣ, ನೀರು ಮತ್ತು ಮನೆಗಳನ್ನು ಎಲ್ಲರಿಗೂ ನೀಡುವ ಪಂಚರತ್ನ ಯೋಜನೆ ಜಾರಿ ಮಾಡುವುದಾಗಿ ಕುಮಾರಸ್ವಾಮಿ ಹೇಳಿದರು.
ಜಾತ್ಯತೀತ ಜನತಾ ದಳ ದಲಿತರ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ತುಮಕೂರು ಜಿಲ್ಲೆಗೆ ದ್ರೋಹ ಬಗೆದಿದೆ ಎಂದು ಸುಳ್ಳು ಹಬ್ಬಿಸುತ್ತಿದ್ದು, ದೇವೇಗೌಡರು ತುಮಕೂರು ಜಿಲ್ಲೆಗೆ ನೀರು ಕಲ್ಪಿಸಲು ಹೋರಾಟ ಮಾಡದೆ ಇದ್ದರೆ ಜಿಲ್ಲೆ ಶಾಶ್ವತವಾಗಿ ಬರಕ್ಕೆ ತುತ್ತಾಗುತ್ತಿತ್ತು ಎಂದು ತಿಳಿಸಿದರು.


