ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ರೈತರಿಂದ ಯದ್ವಾತದ್ವ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ಮೇಲೆ ಗುತ್ತಿಗೆದಾರರ ಸಂಘ 40ರಷ್ಟು ಲಂಚದ ಆರೋಪ ಮಾಡಿದೆ. ಪ್ರಧಾನಿಗೂ ಪತ್ರ ಬರೆದಿದೆ. ಪತ್ರ ಬರೆದು 10 ತಿಂಗಳಾದರೂ ಪ್ರಧಾನಿ ಮೋದಿಯವರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮಾಹಿತಿ ಪಡೆದು ತನಿಖೆ ಮಾಡಿಲ್ಲ. ಪ್ರಧಾನಿ ನಾನು ತಿನ್ನುವುದಿಲ್ಲ. ತಿನ್ನಲೂ ಬಿಡುವುದಿಲ್ಲ ಎಂದು ಹೇಳಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಭ್ರಷ್ಟಾಚಾರಕ್ಕೆ ಕೇಂದ್ರದ ಕುಮ್ಮಕ್ಕು ಇರುವ ಅನುಮಾನ ವ್ಯಕ್ತವಾಗುತ್ತದೆ ಎಂದು ದೂರಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಈಶ್ವರಪ್ಪನವರ ಕಮಿಷನ್ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಡೆತ್ ನೋಟ್ ನಲ್ಲಿ ಈಶ್ವರಪ್ಪ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದೆ ಅಬಕಾರಿ ಸಚಿವರಾಗಿದ್ದ ನಾಗೇಶ್ ಭ್ರಷ್ಟಾಚಾರಕ್ಕೆ ಸಿಲುಕಿ ರಾಜಿನಾಮೆ ಕೊಟ್ಟಿದ್ದಾರೆ. ಮತ್ತೊಬ್ಬರು ಲೈಂಗಿಕ ಹಗರಣದಲ್ಲಿ ಸಿಲುಕಿ ರಾಜಿನಾಮೆ ನೀಡಿದ್ದಾರೆ. ಭ್ರಷ್ಟ ಸಚಿವರ ಹೆಸರನ್ನು ಗುತ್ತಿಗೆದಾರರ ಸಂಘ ಬಹಿರಂಗಪಡಿಸಬೇಕು ಎಂದ ಆಗ್ರಹಿಸಿದರು.
ಸರ್ಕಾರದ ವೈಫಲ್ಯ ಮತ್ತು ನಮ್ಮ ಸಾಧನೆಯನ್ನು ಜನರ ಮುಂದೆ ಇಡುವ ಕೆಲಸ ಆಗಬೇಕು. ನಮ್ಮ ಸರ್ಕಾರ ಇದ್ದಾಗ ಭಾಗ್ಯಗಳ ಸರ್ಕಾರ ಇತ್ತು. ಇಂದು ದೌರ್ಭಾಗ್ಯಗಳ ಸರ್ಕಾರ ಅಧಿಕಾರದಲ್ಲಿದೆ ಎಂದು ದೂರಿದರು.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ದಿವ್ಯ ಹಾಗರಗಿ ಅವರು ತಲೆಮರೆಸಿಕೊಂಡು 15 ದಿನಗಳಾದರೂ ಇನ್ನು ಬಂಧಿಸಲು ಆಗಿಲ್ಲ. ಅವರಿಗೆ ಪೊಲೀಸ್ ಮತ್ತು ಸರ್ಕಾರವೇ ರಕ್ಷಣೆ ನೀಡುತ್ತಿದೆ. ಹೀಗಾಗಿ ಬಂಧಿಸಿಲ್ಲ. ಅವರಿಗೆ ಜಾಮೀನು ಸಿಗಲಿ ಎಂದು ಕಾಯುತ್ತಿದ್ದಾರೆ. ಹೀಗೆ ಸರ್ಕಾ ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಭ್ರಷ್ಟರನ್ನು ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.
ಈಶ್ವರಪ್ಪ ಶಿವಮೊಗ್ಗದಲ್ಲಿ ವ್ಯಕ್ತಿಯ ಹತ್ಯೆಯಾದಾಗ ಸೆಕ್ಷನ್ 144 ನಿಯಮ ಉಲ್ಲಂಘಿಸಿ ಶವಯಾತ್ರೆ ಮಾಡಿದರು. ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಆಳಂದದಲ್ಲಿ ಕೇಂದ್ರ ಸಚಿವ ಖೂಬಾ ಅವರು ಸೆಕ್ಷನ್ 144 ಉಲ್ಲಂಘನೆ ಮಾಡಿದ್ದಾರೆ. ಅವರ ವಿರುದ್ದ ಪ್ರಕರಣ ದಾಖಲಿಸುವುದಿಲ್ಲ. ಆದರೆ ಮೇಕೆದಾಟು ಪಾದಯಾತ್ರೆ ಮಾಡಿದ ನನ್ನ ಮೇಲೆ ಮತ್ತು ಶಿವಕುಮಾರ್ ಸೇರಿ ಹಲವರ ವಿರುದ್ದ 9 ಕೇಸ್ ದಾಖಲಿಸಲಾಗಿದೆ ಎಂದು ಕಿಡಿಕಾರಿದರು.


