ಇಂಧನ, ಅಡುಗೆ ಅನಿಲ, ಅಡುಗೆ ಎಣ್ಣೆ ಸೇರಿದಂತೆ ದಿನಬಳಕೆ ವಸ್ತುಗಳು, ರಸಗೊಬ್ಬರ, ಕಟ್ಟಡ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳು ಹೀಗೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಹೀಗಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೌನ ವಹಿಸಿರುವುದನ್ನು ಖಂಡಿಸಿ ಬೆಲೆ ಏರಿಕೆಮುಕ್ತ ಭಾರತಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಸಾವಿರಾರು ಕಾರ್ಯಕರ್ತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಬೆಲೆ ಏರಿಕೆ ನೆಪದಲ್ಲಿ ಕೇಂದ್ರ ಸರ್ಕಾರ ಬಡವರ ಲೂಟಿಗೆ ಇಳಿದಿದೆ. ಐದು ರಾಜ್ಯಗಳ ಚುನಾವಣೆ ನಂತರ ಪ್ರತಿನಿತ್ಯ ಅಗತ್ಯವಸ್ತುಗಳ ಬೆಲೆ ಗಗನಕ್ಕೆ ಏರಿದರೆ ಆದಾಯ ಮಾತ್ರ ಪಾತಾಳಕ್ಕೆ ಹೋಗುತ್ತಿದೆ. ಮೋದಿ ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು. ಆದರೆ ಆದಾಯ ಬರುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದರು.
ದೇಶದ 17 ಸಾವಿರ ಉದ್ದಿಮೆದಾರರು ಈ ಸರ್ಕಾರದ ಕಿರುಕುಳ ತಾಳಲಾರದೆ ದೇಶ ತೊರೆದು ವಿದೇಶಗಳಿಗೆ ಹೋಗುತ್ತಿದ್ದಾರೆ. ಪ್ತತಿ ವ್ಯಕ್ತಿಯೂ ಈ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುವಂತೆ ಆಗಿದೆ. ಸಣ್ಣ ಬೈಕು, ಕಾರು ಇಟ್ಟುಕೊಂಡ ಕುಟುಂಬಕ್ಕೆ ದಿನಕ್ಕೆ 100 ರೂ ವೆಚ್ಚ ಹೆಚ್ಚಾಗಿದೆ. ಅಡುಗೆ ಅನಿಲ 1 ಸಾವಿರ ರೂ ಆಗಿದೆ. ವಿದ್ಯುತ್ ಬೆಲೆ ಹೆಚ್ಚಾಗುತ್ತಿದೆ. ಬಟ್ಟೆ ಬೆಲೆ ಶೇ.20ರಷ್ಟು ಹೆಚ್ಚಳವಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಬೆಲೆ ಏರಿಕೆ ನಿಯಂತ್ರಣ ಮಾಡುವ ಬದಲು ಸರ್ಕಾರ ಮೌನವಹಿಸಿದೆ. ಇದನ್ನು ಪ್ರಶ್ನೆ ಮಾಡಬೇಕು. ನೂತನ ಪದಾಧಿಕಾರಿಗಳು ಪ್ರತಿ ಕ್ಷೇತ್ರ, ಮನೆಮನೆಗೂ ಹೋಗಿ ಜನರನ್ನು ಮಾತನಾಡಿಸಿ ಅವರಿಗೆ ಕಾಂಗ್ರೆಸ್ ನೀತಿಗಳ ಬಗ್ಗೆ ಮನವರಿಕೆ ಮಾಡಬೇಕು. ಈ ಸರ್ಕಾರ ಹೇಗೆ ಅನ್ಯಾಯ ಮಾಡುತ್ತಿದೆ. ಕೋವಿಡ್ ಸಮಯದಲ್ಲಿ ಹೇಗೆ ನಡೆದುಕೊಂಡಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕು. ಪಕ್ಕದ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಕೊಟ್ಟರು ಇಲ್ಲಿ ಯಾವುದೇ ನೆರವು ನೀಡಲಿಲ್ಲ ಎಂದು ದೂರಿದರು.

ಚಾಲಕರು, ಸಂಪ್ರದಾಯಿಕ ವೃತ್ತಿಪರರಿಗೆ ನೆರವು ನೀಡುವಂತೆ ಪ್ರತಿಭಟನೆ ಮಾಡಿದರೂ ಸರ್ಕಾರ ನೀಡಲಿಲ್ಲ. ಕೋವಿಡ್ ನಿಂದ 4.5 ಲಕ್ಷ ಜನರ ಸತ್ತಿದ್ದರೆ, ಸರ್ಕಾರ 45 ಸಾವಿರ ಲೆಕ್ಕ ಕೊಡುತ್ತಿದೆ. ಅವರಿಗೂ ಪರಿಹಾರ ನೀಡಿಲ್ಲ. ದೇಶದಲ್ಲಿ ಶೇ.40ರಷ್ಟು ಕಮಿಷನ್ ಪಡೆಯುವ ಸರ್ಕಾರ ಇದ್ದರೆ ಅದು ರಾಜ್ಯ ಬಿಜೆಪಿ ಸರ್ಕಾರ. ಇದರ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ವಿರೋಧ ಪಕ್ಷಗಳ ಮುಖಂಡರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದೆ. ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಿರುಕುಳ ನೀಡುತ್ತಿದೆ. ನ್ಯಾಯ, ನೀತಿ, ಸತ್ಯ, ಧರ್ಮದಲ್ಲಿ ನಾವು ಕೆಲಸ ಮಾಡುತ್ತಿದ್ದು ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದರು.
ಸಿದ್ದರಾಮಯ್ಯ ಸರ್ಕಾರ ಬಂದಾಗ 177 ಕಾರ್ಯಕ್ರಮ ಘೋಷಿಸಿದ್ದು 165 ಕಾರ್ಯಕ್ರಮ ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆ ತೆಗೆದುಕೊಂಡು ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ ತೀರ್ಮಾನಿಸಲಿ ಎಂದು ಟೀಕಿಸಿದರು.


