ಸಿದ್ದಗಂಗಾ ಮಠ ಅಕ್ಷರ, ಅನ್ನ ಹಾಗೂ ಆಶ್ರಯ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಈ ಮಠ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ. ಎಲ್ಲರೂ ಈ ಮಠಕ್ಕೆ ಶ್ರದ್ಧೆ ಮತ್ತು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಅದರಂತೆಯೇ ನಾವು ಅದೇ ಮಾರ್ಗದಲ್ಲಿ ನಡೆಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಡಾ.ಶಿವಕುಮಾರ ಶ್ರೀಗಳ 115ನೇ ಜಯಂತೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ ನಡೆದ ಈ ನೆಲದಲ್ಲಿ ನಡೆಯುತ್ತಿದ್ದರೆ ನಮಗೆ ಸ್ಪೂರ್ತಿ-ಪ್ರೇರಣೆಯ ಜೊತೆಗೆ ಶಾಂತಿ ಸಿಗುತ್ತದೆ ಎಂದರು.
ಶ್ರೀಗಳ ಹಾದಿಯಲ್ಲಿ ನಡೆದರೆ ಒಳ್ಳೆಯದಾಗುತ್ತದೆ. ಶ್ರೀಗಳು 88 ವರ್ಷದ ದೀರ್ಘಕಾಲದವರೆಗೆ ಅನ್ನ, ಅಕ್ಷರ ಮತ್ತು ಆಶ್ರಯ ದಾಸೋಹ ಮಾಡಿದ್ದಾರೆ. ಮಠದ ಆರಂಭ ದಿನದಲ್ಲಿ ಹಚ್ಚಿದ ಅಡುಗೆಯ ಕಿಚ್ಚು ಇಂದಿಗೂ ಉರಿಯುತ್ತಿದೆ. ಬಡಮಕ್ಕಳ ಹೊಟ್ಟೆಯ ಕಿಚ್ಚನ್ನು ತಣಿಸುತ್ತಿದೆ ಎಂದು ಹೇಳಿದರು.
ಶಿವಕುಮಾರ ಸ್ವಾಮೀಜಿ ಇಂದು ನಮ್ಮೊಂದಿಗೆ ಇಲ್ಲ. ಅವರು ಲಿಂಗೈಕ್ಯರಾಗಿದ್ದಾರೆ ಎಂದು ಹೇಳಲು ಆಗುತ್ತಿಲ್ಲ. ಹಾಗಾಗಿ ಅವರು ನಮ್ಮೆಲ್ಲರ ನಡುವೆಯೇ ಇದ್ದಾರೆ. ಸ್ವಾಮಿ ವಿವೇಕಾನಂದ ಹೇಳಿದಂತೆ ಸಾಧಕನಿಕನಿಗೆ ಸಾವು ಅಂತ್ಯವಿಲ್ಲ. ಅವರು ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಬಿಸಿಯೂಟ ಯೋಜನೆಗೆ ಶಿವಕುಮಾರ ಶ್ರೀಗಳ ಹೆಸರು – ಸಿಎಂ
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ರಾಘವೇಂದ್ರ ಅವರು ಮಾತನಾಡಿ ಸಿದ್ದಗಂಗಾ ಮಠ ಲಕ್ಷಾಂತರ ಮಂದಿಗೆ ಅನ್ನದಾಸೋಹವನ್ನು ಮಾಡುತ್ತಿದೆ. ಹಾಗಾಗಿ ಮಕ್ಕಳ ಬಿಸಿಯೂಟ ಯೋಜನೆಗೆ ಶಿವಕುಮಾರಸ್ವಾಮೀಜಿಯ ಹೆಸರಿಡಬೇಕು ಎಂದು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಡಾ.ಶಿವಕುಮಾರ ಸ್ವಾಮೀಜಿ ಹೆಸರನ್ನು ಇಡಲಾಗುವುದು. ಈ ಸಂಬಂಧ ಶೀಘ್ರವೇ ಆದೇಶ ಹೊರಬೀಳಲಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಭಗವಂತ ಖೂಬ, ಪ್ರಹ್ಲಾದ ಜೋಶಿ, ಎ.ನಾರಾಯಣಸ್ವಾಮಿ, ರಾಜ್ಯದ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಬಿ.ಸಿ.ನಾಗೇಶ್, ವಿಜಯೇಂದ್ರ, ಶಾಸಕ ಜ್ಯೋತಿ ಗಣೇಶ್ ಮೊದಲಾದವರು ಇದ್ದರು.


