ಕರ್ನಾಟಕದಲ್ಲಿ ಹಿಜಾಬ್ ವಿವಾದ ಮತ್ತು ಹಿಂದೂ ದೇವಾಲಯಗಳ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಮಧ್ಯಪ್ರವೇಶಿಸುವಂತೆ ಕೋರಿ ಸಾಹಿತಿಗಳು ಹೋರಾಟಗಾರರು ಸೇರಿದಂತೆ 61 ಗಣ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಪರಿಚಯಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು, ಇದರ ಬದಲಿಗೆ ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನವನ್ನು ಕಲಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸಾಹಿತಿಗಳಾದ ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್ ಸೇರಿದಂತೆ ಅನೇಕರು ಸಹಿ ಮಾಡಿರುವ ಪತ್ರದಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸುವ ಮಾರ್ಗಸೂಚಿಗಳನ್ನು ಹಿಂಪಡೆಯಬೇಕು. ಮುಸ್ಲಿಂ ವ್ಯಾಪಾರಿಗಳು ದೇವಾಲಯದ ಉತ್ಸವಗಳಲ್ಲಿ ಪಾಲ್ಗೊಳ್ಳದಂತೆ ನಿಷೇಧಿಸಿರುವುದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಬಡ ಮುಸ್ಲಿಂ ವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಲು ತೀವ್ರಗಾಮಿ ಶಕ್ತಿಗಳು ಹಿಜಾಬ್ ಅನ್ನು ಸಾಧನವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕೋವಿಡ್-19ರ ಕಾರಣದಿಂದ ಎರಡು ವರ್ಷಗಳ ವಿರಾಮದ ನಂತರ ಶಾಲೆಗಳು ಪುನರಾರಂಭಗೊಂಡಂತೆಯೇ ಶಿಕ್ಷಣ ಸಂಸ್ಥೆಗಳ ವಾತಾವರಣವು ವಿವಾದಗಳಿಂದ ಕಲುಷಿತಗೊಂಡಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಶಾಲಾ ಪಠ್ಯಕ್ರಮದ ಭಾಗವಾಗಿ ಭಗವದ್ಗೀತೆಯನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ. ಅದರ ಬದಲಿಗೆ ಮಕ್ಕಳು ಸಂವಿಧಾನವನ್ನು ಅಧ್ಯಯನ ಮಾಡಬೇಕು ಎಂದು ಸಾಹಿತಿಗಳು, ಹೋರಾಟಗಾರರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಕೋವಿಡ್ ಕಾರಣದಿಂದ ಹಣದುಬ್ಬರ, ನಿರುದ್ಯೋಗ ಹೆಚ್ಚಾಗಿದೆ. ಸಂಬಳ ಕಡಿತದಂತಹ ಸಮಸ್ಯೆಗಳಿಂದ ಜನರು ಈಗಾಗಲೇ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿದಿನ ಶಾಂತಿ ಮತ್ತು ಸೌಹಾರ್ದತೆಗೆ ಭಂಗವುಂಟಾಗುತ್ತಿರುವುದನ್ನು ನಿರಾಶಾದಾಯಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.