ಬಿಜೆಪಿ ನಾಯಕರು ಮುಸ್ಲೀಂ ಸಮುದಾಯದ ಸಣ್ಣಪುಟ್ಟ ವ್ಯಾಪಾರಿಗಳನ್ನು ಮಾತ್ರ ಗುರಿ ಮಾಡುತ್ತಿದ್ದು ಈಗ ಹಲಾಲ್ ಕಟ್ ಮಾಂಸ ಮಾರಾಟ ನಿರ್ಬಂಧ ವಿಚಾರ ತಂದಿದ್ದಾರೆ. ಇದೆಲ್ಲದರ ಬಗ್ಗೆ ಮಾತನಾಡುತ್ತಿರುವ ಬಿಜೆಪಿಯರು ಬಜೆಟ್ ಕಟ್ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಶಾಸಕ ಪ್ರಿಯಾಂಕ ಖರ್ಗೆ ಆರೋಪಿಸಿದರು.
ಬಿಜೆಪಿಯವರು ಜಿಹಾದ್ ಎಂದರೆ ಯುದ್ದ, ಭಯೋತ್ಪಾದನೆ ಎಂದು ಬಿಂಬಿಸುತ್ತಿದ್ದಾರೆ. ಈ ಸರ್ಕಾರ ಕೂಡ ಬೇರೆ ಬೇರೆ ಸಮುದಾಯದ ವಿರುದ್ಧ ಭಯೋತ್ಪಾದನೆ ನಡೆಸುತ್ತಿದೆ ಎಂದು ದೂರಿದರು.
ನಾವು ಆರ್ಥಿಕವಾಗಿ ಜಿಹಾದ್ ನಡೆಸುತ್ತೇವೆ ಎಂದು ಹೇಳಿದ್ದು, ಬಿಜೆಪಿಯವರು ಬೇರೆ ಸಮುದಾಯಗಳ ಮೇಲೆ ನಡೆಸುತ್ತಿರುವ ಆರ್ಥಿಕ ಜಿಹಾದ್ ಬಗ್ಗೆ ಯಾಕೆ ಚರ್ಚೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿಯವರ ಆರ್ಥಿಕ ಜಿಹಾದ್ ಅಲ್ಪಸಂಖ್ಯಾತರಿಗೆ ಮಾತ್ರವಲ್ಲ, ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿ, ಪರಿಶಿಷ್ಟರು, ಹಿಂದುಳಿದ ವರ್ಗದವರು, ಆರ್ಥಿಕವಾಗಿ ಹಿಂದುಳಿದವರು, ಮಹಿಳೆಯರ ಮೇಲೂ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ಈ ಬಜೆಟ್ ನಲ್ಲಿ ಯಾವುದಾದರೂ ವಲಯದಲ್ಲಿ ಸರ್ವಸ್ಪರ್ಶಿ ಮಾಡಿದ್ದರೆ ಅದು ಅಭಿವೃದ್ಧಿಯಲ್ಲ, ಭ್ರಷ್ಟಾಚಾರದಲ್ಲಿ ಅವರು ಯಾವುದೇ ಸಚಿವಲಾಯ, ಯಾವುದೇ ಸಮುದಾಯದ ಗುತ್ತಿಗೆದಾರರನ್ನು ಬಿಟ್ಟಿಲ್ಲ ಎಂದು ಆರೋಪಿಸಿದರು.
ಮಾಜಿ ಸಚಿವ ರೇಣುಕಾಚಾರ್ಯ ಅವರ ಕುಟುಂಬ ಸದಸ್ಯರಿಗೆ ನಕಲಿ ಜಾತಿ ಪ್ರಮಾಣ ಪತ್ರ ಹೇಗೆ ಸಿಕ್ಕಿತು. ಅವರು ಸಾಮಾನ್ಯ ವ್ಯಕ್ತಿ ಅಲ್ಲ. ಮಾಜಿ ಸಚಿವರಾಗಿದ್ದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿದ್ದಾರೆ. ಅಂತಹವರು ನಕಲಿ ಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳುತ್ತಾರೆ ಎಂದರೆ ಇವರಿಗೆ ನಾಚಿಕೆ ಇಲ್ಲವೇ? ರಾಜಿನಾಮೆ ನೀಡುವ ನೈತಿಕತೆ ಇಲ್ಲವೇ? ಇದು ಸಂವಿಧಾನದ ಮೇಲಿನ ಜಿಹಾದ್ ಅಲ್ಲವೇ ಎಂದು ಕೇಳಿದರು.
ಗುತ್ತಿಗೆದಾರರ ವಿರುದ್ಧ ಜಿಹಾದ್ ನಡೆಸುತ್ತಿದ್ದೀರಿ. ಅವರು ಪ್ರಧಾನಿಗಳಿಗೆ ಶೇ.40ರಷ್ಟು ಲಂಚದ ಆರೋಪ ಬಗ್ಗೆ ಪತ್ರ ಬರೆದರೆ ಇನ್ನು ಸಾಕ್ಷಿ ಕೇಳಿಕೊಂಡು ಕೂತಿದ್ದೀರಿ. ಇದು ಕರ್ನಾಟಕ ಸರ್ಕಾರದಲ್ಲಿ ನೋಂದಾಯಿತ ಅಧಿಕೃತ ಸಂಘ. ಅಲ್ಲಿ ಕೆಲಸ ಮಾಡುವ ಗುತ್ತಿಗೆದಾರರು ನೋಂದಣಿ ಆಗಿರಬೇಕು. ಸರ್ಕಾರಕ್ಕೆ ಜಿಎಸ್.ಟಿ ಕಟ್ಟುತ್ತಾಋಎ. ಸರ್ಕಾರದ ಕಾಮಗಾರಿ ಕೆಲಸ ಮಾಡುತ್ತಾರೆ. ಆದರೂ ಸಾಕ್ಷಿ ಕೇಳುತ್ತಾರೆ ಎಂದು ಲೇವಡಿ ಮಾಡಿದರು.
ನೀವು ಭಾರತವನ್ನು ವಿಶ್ವಗುರು ಮಾಡಲು ಹೊರಟಿದ್ದೀರೋ, ಪಾಕಿಸ್ತಾನ ಮಾಡಲು ಹೊರಟಿದ್ದೀರೋ? ಕರ್ನಾಟಕವನ್ನು ಯುಪಿ ಮಾಡುತ್ತಿದ್ದೀರೋ? ಒಂದು ಸಮುದಾಯದವರ ಅಂಗಡಿಯಲ್ಲಿ ಕೋಳಿ ಖರೀದಿ ಮಾಡಬೇಡಿ ಎನ್ನುತ್ತೀರಾ? ಅಲ್ಲಿರುವ ಕೋಳಿಗಳನ್ನು ಎಲ್ಲಿ ಸಾಕಿರುತ್ತಾಋಎ ಎಂದು ಗೊತ್ತಾಗುತ್ತದೆಯೇ ಎಂದು ಪ್ರಶ್ನಿಸಿದರು.