ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕು ಪಳವಳ್ಳಿ ಕೆರೆಯ ಬಳಿ ಖಾಸಗಿ ಬಸ್ ಅಪಘಾತ ಸಂಭವಿಸಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದು ಅವರಿಗೆ ಸೂಕ್ತ ಪರಿಹಾರ ನೀಡಬೇಕು, ಗಾಯಾಳುಗಳಿಗೂ ಚಿಕಿತ್ಸಾ ವೆಚ್ಚ ಭರಿಸಬೇಕು ಎಂದು ಎಸ್.ಎಫ್.ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ ಒತ್ತಾಯಿಸಿದ್ದಾರೆ.
ವೈ.ಎನ್. ಹೊಸಕೋಟೆ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಪಾವಗಡಕ್ಕೆ ಬರುತ್ತಾರೆ. ಬೆಳಗ್ಗೆ 8 ಗಂಟೆಯಿಂದ 10 ಗಂಟೆಯೊಳಗೆ ಈ ಭಾಗದಲ್ಲಿ ಬಸ್ ಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ವಿದ್ಯಾರ್ಥಿಗಳು ಖಾಸಗಿ ಬಸ್ ನಲ್ಲಿ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಹೆಚ್ಚುವರಿ ಕೆಎಸ್ಆರ್.ಟಿಸಿ ಬಸ್ ಬಸ್ ಗಳನ್ನು ಬಿಡಬೇಕು ಎಂದು ಆಗ್ರಹಿಸಿದ್ದಾರೆ.
ದಿ ನ್ಯೂಸ್ ಕಿಟ್ ಜೊತೆ ಮಾತನಾಡಿದ ಶಿವಣ್ಣ, ಬೆಳಗಿನ ವೇಳೆ ಬಸ್ ಗಳು ಕಡಿಮೆ ಇರುವುದರಿಂದ ತರಗತಿಗಳಿಗೆ ಹೋಗಲು ಸಮಯವಾಗುತ್ತದೆ. ಆ ಕಾರಣಕ್ಕಾಗಿ ವಿದ್ಯಾರ್ಥಿಗಳು ಸಿಕ್ಕ ಬಸ್ಸನ್ನು ಹತ್ತಿಕೊಂಡು ಹೋಗಬೇಕಾಗುತ್ತದೆ. ಬಸ್ ಕಡಿಮೆ ಸಂಖ್ಯೆಯಲ್ಲಿ ಇರುವ ಕಾರಣ ಬಸ್ ಮೇಲೆಯೂ ಕುಳಿತು ಹೋಗಬೇಕಾದಂತಹ ಪರಿಸ್ಥಿತಿ ಇದೆ. ಹಾಗಾಗಿ ಹೆಚ್ಚುವರಿ ಬಸ್ ಗಳನ್ನು ಬಿಡಬೇಕು. ಆಗ ಮಾತ್ರ ಇಂತಹ ಅವಘಡಗಳನ್ನು ತಡೆಯಬಹುದು ಎಂದು ಹೇಳಿದ್ದಾರೆ.
ವೈ.ಎನ್.ಹೊಸಕೋಟಿಯಿಂದ ಪಾವಗಡಕ್ಕೆ ಬರುವ ರಸ್ತೆ ಅವೈಜ್ಞಾನಿಕವಾಗಿದೆ. ಪಳವಳ್ಳಿ ಕೆರೆಯ ಬಳಿ ರಸ್ತೆ ಸಾಕಷ್ಟು ತಿರುವುಗಳನ್ನು ಹೊಂದಿದೆ. ಬಸ್ ಗಳು ಕೂಡ ಅತಿವೇಗವಾಗಿ ಹೋಗುತ್ತವೆ. ಹಾಗಾಗಿ ಅವೈಜ್ಞಾನಿಕ ರಸ್ತೆಯಲ್ಲಿ ವಾಹನಗಳು ವೇಗವಾಗಿ ಚಾಲನೆ ಮಾಡುವುದರಿಂದ ಇಂತಹ ಅಪಘಾತಗಳು ಸಂಭವಿಸುತ್ತವೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಹಲವು ಬಾರಿ ರಸ್ತೆಗಳು ಅವೈಜ್ಞಾನಿಕವಾಗಿದ್ದು ಅವುಗಳನ್ನು ಸರಿಪಡಿಸುವಂತೆ ಮನವಿ ಸಲ್ಲಿಸಿದ್ದೇವೆ. ಪಳವಳ್ಳಿ ಭಾಗದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಲೇ ಇವೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೇವೆ. ಆದರೂ ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಲು ಕ್ರಮ ವಹಿಸಿಲ್ಲ ಎಂದು ಈ.ಶಿವಣ್ಣ ದೂರಿದ್ದಾರೆ.
ಇಂದು ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿಗಳೇ ಹೆಚ್ಚು ಮಂದಿ ಮೃತಪಟ್ಟಿದ್ದು ಅವರಿಗೆ ಸೂಕ್ತ ಪರಿಹಾರ ಘೋಷಿಸಬೇಕು. ಗಾಯಾಳು ಗಳಿಗೆ ಚಿಕಿತ್ಸಾ ವೆಚ್ಚ ಭರಿಸಬೇಕು ಎಂದು ಆಗ್ರಹಿಸಿದ್ದಾರೆ.