ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರು ನಗರಕ್ಕೆ ಹೊಂದಿಕೊಂಡಿರುವ ಭೀಮಸಂದ್ರ ಮತ್ತು ಮರಳೂರು ಕೆರೆಗಳಿಗೆ ಹೇಮಾವತಿ ನೀರು ಹರಿಸಿ ಕುಡಿಯುವ ನೀರು ಪೂರೈಕೆ ಮಾಡುವುದರಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪರಿಸರವಾದಿಗಳು ಮತ್ತು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮಳೆಗಾಲದಲ್ಲಿ ಸುರಿದ ಮಳೆಗೆ ಮರಳೂರು ಕೆರೆಗೆ ಸ್ವಲ್ಪ ಪ್ರಮಾಣದ ನೀರು ಬಂದಿತ್ತು. ಇದರ ಜೊತೆಗೆ ಕೊಳೆಚೆ ನೀರು ಸೇರುತ್ತಿದೆ ಹೀಗಾಗಿ ಇಡೀ ಮರಳೂರು ಕೆರೆ ಗಬ್ಬೆದ್ದು ನಾರುತ್ತಿದೆ. ಇದರಿಂದ ಆಕ್ಸಿಜನ್ ಕಡಿಮೆಯಾಗಲಿದೆ. ವಿಷಕಾರಿ ರಾಸಾಯನಿಕಯುಕ್ತ ನೀರನ್ನು ಜನರ ಬಳಕೆಗೆ ಪೂರೈಕೆ ಮಾಡುವುದರಿಂದ ಹಲವು ರೋಗಗಳಿಗೆ ಕಾರಣವಾಗಲಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
ಕಡಿಮೆ ಆಕ್ಸಿಜನ್ ಪಡೆದು ಕೆರೆಯಲ್ಲಿ ಜೀವಿಸುವ ಆನೆಮೀನು, ಜುಲೇಬಿ ಮೀನುಗಳು ವಿಷಕಾರಿಯಾಗಿರುತ್ತವೆ. ಇವುಗಳನ್ನು ಹಿಡಿದು ತಿನ್ನುವುದರಿಂದ ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ತುಮಕೂರು ಅಮಾನಿಕೆರೆಗೆ ಹೇಮಾವತಿ ನೀರು ಬಿಡುತ್ತಿದ್ದು ಇಲ್ಲಿಯೂ ವಿಷಕಾರಿ ಕಳೆಯನ್ನು ಸಂಪೂರ್ಣ ನಾಶಪಡಿಸಲು ಸಾಧ್ಯವಾಗಿಲ್ಲ ಎಂಬುದನ್ನು ಸ್ಮಾರ್ಟ್ ಸಿಟಿ ಆಡಳಿತ ಮಂಡಳಿ ಮರೆಯಬಾರದು.
ಮರಳೂರು, ಸರಸ್ಪತಿಪುರಂ, ವರ್ತುಲ ರಸ್ತೆಯ ದಕ್ಷಿಣ ಭಾಗಕ್ಕೆ ಇರುವ ಬಡಾವಣೆಗಳಿಂದ ನಿತ್ಯವೂ ಕೊಳೆಚೆ ನೀರು ಮರಳೂರು ಕೆರೆ ಹರಿಯುತ್ತಿದ್ದ ಕೆರೆಯ ನೀರು ಮಲಿನವಾಗುತ್ತಿದೆ. ಇಂತಹ ವಿಷಕಾರಿ ನೀರನ್ನು ಶುದ್ದೀಕರಿಸದೆ, ಕಳೆಯನ್ನು ಸಂಪೂರ್ಣ ನಾಶಪಡಿಸದೆ ಹೇಮಾವತಿ ನೀರು ಹರಿಸಿ ಕುಡಿಯುವ ನೀರು ಪೂರೈಕೆ ಮಾಡುವುದು ಅವೈಜ್ಞಾನಿಕ ಕ್ರಮವಾಗುತ್ತದೆ. ಹಾಗಾಗಿ ಮೊದಲು ಕೆರೆಯನ್ನು ಶುಚಿತ್ವಗೊಳಿಸುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ಇಲ್ಲದಿದ್ದರೆ ಜನರು ವಿಷಕಾರಿ ನೀರನ್ನೇ ಕುಡಿಯುವ ಬೇಕಾದ ಪರಿಸ್ಥಿತಿ ಎದುರಾಗುತ್ತದೆ.
ಮರಳೂರು ಕೆರೆಯ ಮುಂಭಾಗದಲ್ಲಿ ಕಾಲೇಜು, ಮನೆಗಳ ನಿರ್ಮಾಣವಾಗಿವೆ. ಜನರು ಕೆರೆಯ ನೀರನ್ನು ಮತ್ತಷ್ಟ ಮಲಿನಗೊಳಿಸುವ ಸಾಧ್ಯತೆ ಇದೆ. ಕಳೆದ ಏಳೆಂಟು ವರ್ಷಗಳ ಹಿಂದೆಯೇ ಮರಳೂರು ಕೆರೆಯ ಉತ್ತರ ಮತ್ತು ಪಶ್ಚಿಮ ಭಾಗದ ಬಡಾವಣೆಗಳಿಂದ ಕೊಳೆಚೆ ನೀರು ಹರಿದು ಬರುತ್ತಿದ್ದ ಸಂದರ್ಭದಲ್ಲಿ ಪರಿಸರವಾದಿಗಳು ಕೆರೆಗೆ ಹರಿಯುತ್ತಿರುವ ಕೊಳಚೆ ನೀರನ್ನು ತಡೆಗಟ್ಟುವಂತೆ ಒತ್ತಾಯಿಸಿದ್ದರು. ಆದರೆ ಇದುವರೆಗೂ ಮರಳೂರು ಕೆರೆಗೆ ಹರಿದು ಬರುತ್ತಿರುವ ಕೊಳೆಚೆ ನೀರನ್ನು ತಡೆಯುವ ಗೋಜಿಗೆ ಹೋಗಿಲ್ಲದಿರುವುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.
ಪರಿಸರವಾದಿ ಡಿ.ವಿ.ಗುಂಡಪ್ಪ ದಿ ನ್ಯೂಸ್ ಕಿಟ್.ಇನ್ ಜೊತೆ ಮಾತನಾಡಿ, ಮರಳೂರು ಕೆರೆಯ ಸುತ್ತಲೂ ತುಮಕೂರು ಅಭಿವೃದ್ಧಿ ಆಗಿದೆ. ಆ ಭಾಗದ ಕೊಳೆಚೆ ನೀರೆಲ್ಲವೂ ಮರಳೂರು ಕೆರೆಗೆ ಹರಿದು ಬರುತ್ತಿದೆ. ಹಲವು ವರ್ಷಗಳಿಂದ ಕೊಳೆಚೆ ನೀರನ್ನು ನಿಲ್ಲಿಸುವಂತೆ ಮನವಿ ಮಾಡಿದರೂ ನಗರಸಭೆ/ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಗೆದ್ದಲಹಳ್ಳಿ, ಸರಸ್ಪತಿಪುರಂ ಈ ಭಾಗದಿಂದ ವಿಷಕಾರಿ ಚರಂಡಿ ನೀರು ಹರಿದು ಮರಳೂರು ಕೆರೆಯನ್ನು ಸೇರುತ್ತಿದೆ. ಆದ್ದರಿಂದ ಮೊದಲು ಕೊಳಚೆ ನೀರು ಹರಿಯುವುದನ್ನು ತಡೆಗಟ್ಟಿ ಕುಡಿಯುವ ನೀರು ಸಂಗ್ರಹಕ್ಕೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಈಗಿರುವ ರೀತಿಯಲ್ಲೇ ಹೇಮಾವತಿ ನೀರು ತುಂಬಿಸಿ ಕುಡಿಯಲು ಪೂರೈಕೆ ಮಾಡಿದರೆ ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. 2001-2002ರಲ್ಲಿ ಮರಳೂರು ಕೆರೆ ತುಂಬಿದ್ದು ಬಿಟ್ಟರೆ ಮತ್ತೆಂದು ಅದು ತುಂಬಿಲ್ಲ. ಆದ್ದರಿಂದ ಕೆರೆಯಲ್ಲಿ ಬೆಳೆದಿರುವ ಕಳೆಯನ್ನು ನಾಶ ಮಾಡಬೇಕು. ಕೆರೆಯನ್ನು ಶುಚಿಗೊಳಿಸಿ ನೀರು ಹರಿಸಿದರೆ ಜನರ ಆರೋಗ್ಯವನ್ನು ಕಾಪಾಡಬಹುದು ಎಂದು ಗುಂಡಪ್ಪ ಹೇಳಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಅಮಾನಿಕೆರೆ, ಮರಳೂರು ಕೆರೆಗೆ ಹೇಮಾವತಿ ನೀರು ಹರಿಸುವ ಮೊದಲು ವಿಷಕಾರಿ ಕಳೆ, ನೀರು ಮತ್ತು ಕೊಳೆಚೆ ನೀರು ಕೆರೆಗಳಿಗೆ ಹರಿಯುವುದನ್ನು ತಡೆಗಟ್ಟಿದರೆ ಜನರ ಆರೋಗ್ಯವೂ ಕಾಪಾಡಿದಂತೆ ಆಗುತ್ತದೆ. ಪರಿಸರವೂ ನೈರ್ಮಲ್ಯತೆಯಿಂದ ಕೂಡಿರುತ್ತದೆ.