ರಷ್ಯಾ ಉಕ್ರೇನ್ ಮೇಲೆ ಶೆಲ್ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ. ಒಂಬತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರ ಎಂದು ಉಕ್ರೇನ್ ಹೇಳಿದೆ.
ದಾಳಿಯ ಸಮಯದಲ್ಲಿ ವಿವರಗಳನ್ನು ನೀಡದೆಯೇ ಉಕ್ರೇನ್ ಸುಮಾರು 50 ರಷ್ಟಾದ ಆಕ್ರಮಣಕಾರರನ್ನು ಕೊಂದು ಹಾಕಿದೆ ಎಂದು ಕೆಲ ಸುದ್ದಿ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ನಲ್ಲಿ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ ಮೇಲೆ ಹಲವು ಸಾವುನೋವುಗಳಾಗಿವೆ. ಈ ನಡುವೆ ಉಭಯ ದೇಶಗಳ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಕಚೇರಿ ಒತ್ತಾಯಿಸಿದೆ.
ರಷ್ಯಾದ ದಾಳಿಯ ನಂತರ ಉಕ್ರೇನ್ ನ ಹಲವಾರು ಪ್ರದೇಶಗಳಲ್ಲಿ ಸ್ಫೋಟಗೊಂಡಿರುವ ಪ್ರಕರಣಗಳು ವರದಿಯಾಗಿವೆ. ಕೈವ್ ನಲ್ಲಿ ವಾಯು ಸೈರನ್ ಗಳು ಕೇಳಿಬಂದಿವೆ. ರಷ್ಯಾದ ರಕ್ಷಣಾ ಸಚಿವಾಲಯವು ಉಕ್ರೇನ್ ವಾಯು ನೆಲೆಗಳು ಮಿಲಿಟರಿ ಮೂಲಸೌಕರ್ಯವನ್ನು ತಟಸ್ಥಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಉಕ್ರೇನಿಯನ್ ವಿದೇಶಾಂಗ ಸಚಿವರು ರಷ್ಯಾದ ವಿರುದ್ಧ ಹೋರಾಟ ನಡೆಸಬೇಕು ಮತ್ತು ರಷ್ಯಾವನ್ನು ಸೋಲಿಸಬೇಕು ಎಂದು ಕರೆ ನೀಡಿದ್ದಾರೆ.
ಈ ನಡುವೆ ರಷ್ಯಾ, ಉಕ್ರೇನ್ ಗಡಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಿಲಿಟರಿ ಪಡೆಗಳನ್ನು ನಿಯೋಜಿಸಿದೆ. ಜೊತೆಗೆ ಶಾಂತಿಪಾಲಕರನ್ನು ನಿಯೋಜಿಸಲು ಆದೇಶಿಸಿದೆ. ಹೀಗಾಗಿ ಉದ್ವಿಗ್ನತೆ ಹೆಚ್ಚಾಗಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.