ಕುಟುಂಬದ ಸದಸ್ಯರಿಗೆ ಯಾವುದೇ ಮಾಹಿತಿ/ನೋಟೀಸ್ ನೀಡದೆ ನಟ ಚೇತನ್ ಅವರನ್ನು ಬಂಧಿಸಿರುವುದು ಕಾನೂನುಗಳ ಉಲ್ಲಂಘನೆ ಆಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ.ನಾಗಣ್ಣ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪೊಲೀಸರು ಚೇತನ್ ಅವರನ್ನು ಬಂಧಿಸುವ ಮೊದಲು ಯಾವ ಕಾರಕ್ಕಾಗಿ ಬಂಧಿಸುತ್ತಿದ್ದೇವೆ ಎಂಬುದನ್ನು ಕುಟುಂಬದ ಸದಸ್ಯರಿಗೆ ಹೇಳಬೇಕಿತ್ತು. ಆದರೆ ನಿಯಮಗಳನ್ನು ಗಾಳಿಗೆ ತೂರಿ ಚೇತನ್ ಅವರನ್ನು ಬಂಧಿಸಿರುವುದು ಖಂಡನೀಯ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಭಜರಂಗ ದಳ ಕಾರ್ಯಕರ್ತ ಹರ್ಷ ಅವರ ಹತ್ಯೆಯ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಶವಯಾತ್ರೆ ನಡೆಸಲಾಯಿತು. ಸಾವಿರಾರು ಮಂದಿ ಮೆರವಣಿಗೆಯಲ್ಲಿ ಇದ್ದರು. ಈ ಮೆರವಣಿಗೆಯ ನೇತೃತ್ವವನ್ನು ಸಚಿವ ಕೆ.ಎಸ್.ಈಶ್ವರಪ್ಪ ವಹಿಸಿದ್ದರು. ಆದರೂ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಬಂಧನ ಮಾಡಲಿಲ್ಲ ಎಂದು ಹೇಳಿದರು.
ಸಚಿವ ಈಶ್ವರಪ್ಪ ಕೆಂಪುಕೋಟೆಯ ಮೇಲಿನ ರಾಷ್ಟ್ರಧ್ವಜ ತೆಗೆದು ಭಾಗವಾಧ್ವಜ ಹಾರಿಸುತ್ತೇವೆ ಎಂದು ಸಂವಿಧಾನಕ್ಕೆ ಅಪಚಾರ ಮಾಡಿದರು. ಇದು ದೇಶದ್ರೋಹ ಹೇಳಿಕೆ ರಾಷ್ಟ್ರಧ್ವಜಕ್ಕೆ ಅಗೌರವ ತರುವಂತಹ ಹೇಳಿಕೆ ನೀಡಿದರು. ಆದರೆ ಈಶ್ವರಪ್ಪ ಅವರ ವಿರುದ್ಧ ಸುಮೊಟು ಕೇಸು ದಾಖಲಿಸಲಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಒಂದು ದೇಶ ಎನ್ನುವವರು ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯ ಮಾಡಲಾಗುತ್ತಿದೆ. ವಹಿಸಿ ಕುರಿತು ಸ್ಪಷ್ಟೀಕರಣ ನೀಡಬೇಕಿತ್ತು. ಯಾವ ಕಾರಣಕ್ಕಾಗಿ ಬಂದಿಸಿದ್ದೀರಿ ಎಂಬುದನ್ನು ತಿಳಿಸಬೇಕಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಹೇಳಿಕೆ ಹಾಕಿದ ಕಾರಣದಿಂದ ಪೊಲೀಸ್ ಇನ್ಸ್ ಪೆಕ್ಟರ್ ಸುಮೋಟು ಕೇಸ್ ದಾಖಲಿಸಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಕಾಳಿ ಸ್ವಾಮೀಜಿ ಗಲಭೆಗೆ ಪ್ರಚೋದನಾತ್ಮಕ ಹೇಳಿಕೆ ನೀಡಿದರೂ ಅವರ ವಿರುದ್ಧ ಕ್ರಮಕೈಗೊಳ್ಳಲಿಲ್ಲ ಯಾಕೆ ಎಂದು ಕೇಳಿದರು.
ಸ್ವಾಮೀಜಿ ಹೇಳಿಕೆ, ಸಚಿವರ ಮಾತುಗಳು ಶಾಂತಿಯನ್ನು ಕದಡುವಂತಹವುಗಳಾಗಿವೆ. ಕೋಮುದ್ವೇಷ ಬಿತ್ತುವ ಮಾತುಗಳನ್ನು ಆಡಿದ್ದರೂ ಮುಖ್ಯಮಂತ್ರಿಗಳು ಜಾಣಮೌನ ತಾಳಿದ್ದಾರೆ. ಇದು ಕೂಡ ಮುಖ್ಯಮಂತ್ರಿಗಳೇ ಇಂತಹ ಪ್ರಚೋದನಾತ್ಮಕ ಹೇಳಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಗುಮಾನಿ ಮೂಡುತ್ತದೆ ಎಂದರು.
ನಟ ಚೇತನ ಫೇಸ್ ಬುಕ್ ನಲ್ಲಿ ಕೇವಲ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಯಾರ ವಿರುದ್ಧವೂ ಟೀಕೆಗಳನ್ನು ಮಾಡಿಲ್ಲ. ಆದರೂ ಬಂಧನ ಪ್ರಶ್ನಾರ್ಹವಾಗಿದೆ. ಚೇತನ್ ವಿಷಯದಲ್ಲಿ ಸರ್ಕಾರ ಷಡ್ಯಂತ್ರ ನಡೆಸಿದೆ. ಇದು ಬಸವಣ್ಣನ ಅನುಯಾಯಿ ಮುಖ್ಯಮಂತ್ರಿಗೆ ಶೋಭೆ ತರುವಂತಹದ್ದಲ್ಲ ಎಂದು ಟೀಕಿಸಿದರು.


