ಹಲ್ದಿ ಸಮಾರಂಭ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು 11 ಮಹಿಳೆಯರೂ ಸೇರಿ 13 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕುಶಿನಗರದ ನಿಬುವಾ ನೌರಂಗಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಘಟನೆ ನಡೆದಾಗ ಸಂತ್ರಸ್ತರು ಪ್ರಾರ್ಥನೆಗೆಂದು ಬಾವಿಯ ಬಳಿ ಹೋಗಿದ್ದರು. ಕತ್ತಲಲ್ಲಿ ಬಾವಿಗೆ ಜಾರಿ ಬಿದ್ದು ಬಾಲಕಿಯರು ಕೂಡ ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಐವರು ಗಾಯಗೊಂಡಿದ್ದು, ಇಬ್ಬರು ಮಹಿಳೆಯ ಪರಿಸ್ಥಿತಿ ಚಿಂತಾಜನಕವಾಗಿದೆ.
ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಮಹಿಳೆಯರು ಬಾವಿಯ ಬಳಿ ಜಮಾಯಿಸಿದ್ದರು. ಇದ್ದಕ್ಕಿದ್ದಂತೆ ಅದರ ಮೇಲೆ ಹಾಕಲಾಗಿದ್ದ ಚಪ್ಪಡಿ ಒಡೆದು ಮಹಿಳೆಯರು ಬಾವಿಗೆ ಬಿದ್ದಿದ್ದಾರೆ ಎಂದು ಕುಶಿನಗರದ ಪೊಲೀಸ್ ವರಿಷ್ಠಾಧಿಕಾರಿ ಸಚೀಂದ್ರ ಪಟೇಲ್ ತಿಳಿಸಿದ್ದಾರೆ.
ಬಾವಿಗೆ ಬೀಳುತ್ತಿದ್ದಂತೆಯೇ ಕಿರುಚಾಟ ಕೇಳಿ ಸ್ಥಳೀಯರು ಓಡಿ ಬಂದು ಸಂತ್ರಸ್ತರನ್ನು ಹೊರತೆಗೆದಿದ್ದಾರೆ. ಈ ಸಂದರ್ಭದಲ್ಲಿ 11 ಮಂದಿ ಮೃತಪಟ್ಟಿದ್ದರೆ, ಇತರೆ ಐವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಟೇಲ್ ಹೇಳಿದರು.
ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಹಿಳೆಯರು ಮೃತಪಟ್ಟಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದ ಅಪಘಾತ ಹೃದಯವಿದ್ರಾವಕವಾಗಿದೆ. ಇದರಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಬೇಕು. ಸ್ಥಳೀಯ ಆಡಳಿತವು ಸಾಧ್ಯವಿರುವ ಎಲ್ಲಾ ರೀತಿಯ ಸಹಾಯದಲ್ಲಿ ತೊಡಗಿಸಿಕೊಂಡಿದೆ ಎಂದು ಮೋದಿ ಟ್ವೀಟ್ ಮಾಡಿ ಹೇಳಿದ್ದಾರೆ.
ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಲಾಗಿದೆ.


