ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಸಚಿವರೊಬ್ಬರ ಜೊತೆ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮಾಜಿ ಸಚಿವರ ಮನೆಯಲ್ಲಿ ನಡೆಸಿದ ಖಾಸಗಿ ಸಭೆ ಹಲವು ಊಹಾಪೋಹಗಳನ್ನು ಹುಟ್ಟುಹಾಕಿದೆ.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಅರ್ಧಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆದಿರುವುದು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ ತವರು ಜಿಲ್ಲೆಗಳಲ್ಲಿ ಜವಾಬ್ದಾರಿಯಿಂದ ಸಚಿವರನ್ನು ಕೈಬಿಟ್ಟು ಯಾವುದೇ ರಾಜಕೀಯ ಹಕ್ಕನ್ನು ಹೊಂದಿರದ ಪ್ರದೇಶಗಳಿಗೆ ಉಸ್ತುವಾರಿಯನ್ನು ವಹಿಸಿದ ಬೆನ್ನಲ್ಲೇ ಶಿವಕುಮಾರ್, ಸಚಿವ ಸಿಂಗ್ ಮನೆಗೆ ಭೇಟಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ಸೌಜನ್ಯದ ಭೇಟಿ-ರಾಜಕೀಯ ಇಲ್ಲ -ಡಿಕೆಶಿ
ಸಚಿವ ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿರುವುದು ಸೌಜನ್ಯದ ಭೇಟಿಯಾಗಿದೆ. ನಾನು ಬಳ್ಳಾರಿ ಉಸ್ತುವಾರಿ ಸಚಿವನಾಗಿದ್ದಾಗ ತುಂಗಾರತಿ ಮಾಡಲಾಗಿತ್ತು. ಅದೇ ರೀತಿ ಮೇಕೆದಾಟು ಸಂಗಮದಲ್ಲಿ ಕಾವೇರಿ ಆರತಿ ಮಾಡಬೇಕು. ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯಿಂದ ಮಾಡಲು ಸಾಧ್ಯವೇ ಎಂದು ನಾನು ಸಚಿವರಲ್ಲಿ ಮನವಿ ಮಾಡಿದ್ದೇನೆ ಎಂದರು.
ನಮ್ಮಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚಿಸಿದ್ದೇನೆ. ಅವರು ಭೇಟಿಯಾಗಿರುವುದಕ್ಕೆ ಬೇರೆ ಯಾವ ರೆಕ್ಕೆ ಪುಕ್ಕವೂ ಬೇಡ. ಅವರು ಸಚಿವರಾಗಿದ್ದು ರಾಜಕಾರಣ ಮಾಡಬೇಕಾದರೆ ನಮ್ಮ ಮನೆಗೆ ಬರುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ರಾಜಕಾರಣ ಮಾಡುವುದಾದರೆ ಗೆಸ್ಟ್ ಹೌಸ್, ಹೋಟೆಲ್ ಗಳಲ್ಲಿ ಮಾಡುತ್ತೇವೆ. ಮನೆಯಲ್ಲಿ ರಾಜಕಾರಣ ಮಾಡುವುದಿಲ್ಲ. ಈ ಬಗ್ಗೆ ಸಾಮಾನ್ಯ ಪರಿಜ್ಞಾನವೂ ಎಲ್ಲರಿಗು ಇರಬೇಕು. ಅವರು ಸಚಿವರಾಗಿದ್ದರೂ ಧೈರ್ಯವಾಗಿ ವಿರೋಧ ಪಕ್ಷದ ನಾಯಕರೊಬ್ಬರ ಮನೆಗೆ ಬರುತ್ತಾಋಎ ಅಂದರೆ ಅದರಲ್ಲಿ ರಾಜಕಾರಣ ಹುಡುಕಲು ಬರುವುದಿಲ್ಲ ಎಂದರು.
ನಾನು ಈ ಭಾಗದ ನಾಯಕನಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಏನೆಲ್ಲ ಅಗತ್ಯವಿದೆ ಎಂಬುದನ್ನು ಚರ್ಚೆ ಮಾಡಿ ತಿಳಿಯಲು ಬಂದಿದ್ದಾರೆ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.