ನನ್ನ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಹಾಗೆಯೇ ಅವರು ಆಡಿರುವ ಮಾತುಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಚುನಾವಣೆಯಲ್ಲಿ ಸೋಲು-ಗೆಲುವು ಮತದಾರರ ಕೈಯಲ್ಲಿದೆ. ಮತದಾರ ಕೊಟ್ಟ ತೀರ್ಪನ್ನು ನಾವು ಸ್ವೀಕಾರ ಮಾಡಬೇಕು. ನಾನು ಸೋತಿದ್ದೇನೆ. ಅವರ ತಂದೆಯೂ ಸೋತಿಲ್ಲವೇ? ಮಗ ಮತ್ತು ಅಣ್ಣ ಸೋತಿಲ್ಲವೇ ಎಂದು ಪ್ರಶ್ನಿಸಿರುವುದನ್ನು ವಾರ್ತಾಭಾರತಿ ವರದಿ ಮಾಡಿದೆ.
ಚುನಾವಣೆಯಲ್ಲಿ ದೇವೇಗೌಡರು, ರೇವಣ್ಣ ಸೋತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪು ಅಂತಿಮ. ನಾನು ರಾಜ್ಯಾಧ್ಯಕ್ಷನಾಗಿದ್ದಾಗ ಕುಮಾರಸ್ವಾಮಿ ಎಲ್ಲಿದ್ದರು ಎಂಬುದೇ ಗೊತ್ತಿಲ್ಲ.ನಾನೇಕೆ ಅವರ ಮುಂದೆ ಹೋಗಿ ಕೈಕಟ್ಟಿ ನಿಲ್ಲಲಿ. ಕಣ್ಣೀರು ಹಾಕಲಿ ಎಂದು ಪ್ರಶ್ನಿಸಿದ್ದಾರೆ.
ಈಗ ರಾಜ್ಯದ ಜನರ ಮುಂದೆ ಕಣ್ಣೀರು ಹಾಕಿರುವುದು ಯಾರೆಂದು ಗೊತ್ತಿದೆ. ನಾನೇಕೆ ಕಣ್ಣೀರು ಹಾಕಲಿ. ಇವರ ಭಾಷೆ ಇವರ ರಾಜಕೀಯ ಸಂಸ್ಕೃತಿ ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ತಮಿಳುನಾಡಿನ ಹೊಗೇನಕಲ್ ಯೋಜನೆಯನ್ನು ರಾಜ್ಯ ಸರ್ಕಾರ ವಿರೋಧಿಸಬೇಕು. ಕಾನೂನು ತಜ್ಞರನ್ನು ಸರ್ಕಾರ ಸಂಪರ್ಕಿಸಬೇಕು ಎಂದು ಹೇಳಿದರು.