ತಜ್ಞರ ವರದಿಯ ಆಧಾರದ ಮೇರೆಗೆ ವಾರದ ಕೊನೆಯ ಎರಡು ದಿವಸ ಹೇರಲಾಗಿದ್ದ ವಿಕೆಂಡ್ ಕರ್ಪ್ಯೂ ರದ್ದುಗೊಳಿಸಿರುವ ರಾಜ್ಯ ಸರ್ಕಾರ ರಾತ್ರಿ ಕರ್ಪ್ಯೂ ಹಾಕಿರುವುದನ್ನು ಮುಂದುವರೆಸಿದೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಧ್ಯಕ್ಷತೆಯಲ್ಲಿಂದು ನಡೆದ ತಜ್ಞರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಆರ್. ಅಶೋಕ್, ತಜ್ಞರ ವರದಿ, ಅಧಿಕಾರಿಗಳ ಅಭಿಪ್ರಾಯ ಮತ್ತು ಸಾಮಾನ್ಯ ಜನರ ಸಲಹೆಗಳನ್ನು ಪರಿಗಣಿಸಿ ವಾರಾಂತ್ಯದ ಲಾಕ್ ಡೌನ್ ರದ್ದುಪಡಿಸಲಾಗಿದೆ ಎಂದು ಹೇಳಿದ್ದಾರೆ.
ಲಾಕ್ ಡೌನ್ ರದ್ದುಗೊಳಿಸುವ ಸಂಬಂಧ ಪಕ್ಕದ ಮಹಾರಾಷ್ಟ್ರ, ಕೇರಳ ರಾಜ್ಯಗಳು ಯಾವ ರೀತಿಯ ಕ್ರಮಗಳನ್ನು ಕೈಗೊಂಡಿವೆ ಎಂಬುದನ್ನು ಪರಿಶೀಲನೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಕೊರೊನ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಸಾವಿನ ಪ್ರಮಾಣ ಕಡಿಮೆ ಇದೆ. ಹಾಗಾಗಿ ರಾತ್ರಿ ಕರ್ಪ್ಯೂವನ್ನು ಮುಂದುವರೆಸಲು ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ ಎಂದು ವಿವರಿಸಿದರು.
ಮದುವೆ, ಪ್ರತಿಭಟನೆ, ಸಭೆ ಸಮಾರಂಭಗಳಿಗೆ ಶೇ.50ರಷ್ಟು ಜನರ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲಾಗಿದೆ. ಹೋಟೆಲ್ ಗಳಿಗೂ ಇದು ಅನ್ವಯವಾಗಲಿದೆ ಎಂದು ಹೇಳಿದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಕೊರೊನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಬಂದ್ ಮಾಡಿದ್ದು, ಮುಂದೆ ತೆಗೆದುಕೊಳ್ಳುವ ತೀರ್ಮಾನದವರೆಗೂ ಹಿಂದಿನ ನಿಯಮಗಳನ್ನು ಮುಂದುವರೆಸಲಾಗುವುದು ಎಂದು ತಿಳಿಸಿದರು.