ಪಾದಯಾತ್ರೆ ವಿಚಾರವಾಗಿ ನಮ್ಮ ಶಾಸಕರು, ವಿರೋಧ ಪಕ್ಷದ ನಾಯಕರು ನಿಮಗೆ ಬೇಕಾದ ಮಾಹಿತಿ ನೀಡಲಿದ್ದು ಅವರೇ ಪಕ್ಷದ ನಿಲುವು ತಿಳಿಸಲಿದ್ದಾರೆ ಎಂದು ಕಾಂಗ್ರೆಸ್ ರಾಜ್ಯಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ನಿನ್ನೆ ನನಗೆ ಕೊರೊನ ಪರೀಕ್ಷೆಗಾಗಿ ಕಳುಹಿಸಿದ್ದ ಅಧಿಕಾರಿಗೆ ಪಾಸಿಟಿವ್ ಎಂಬ ಮಾಹಿತಿ ಇದೆ ಎಂಬ ಮಾಹಿತಿ ಇದೆ. ಅವರು ನನ್ನನ್ನು ಏನು ಮಾಡಬೇಕು ಎಂದುಕೊಂಡಿದ್ದಾರೆ. ನನ್ನ ಸಂಕಲ್ಪ ಏನು ಎಂದು ಅವರಿಗೆ ಗೊತ್ತಿದೆ. ಆದರೂ ಇಂತಹ ನೀಚ ರಾಜಕಾರಣ ಯಾಕೆ ಮಾಡುತ್ತಿದ್ದಾರೆ? ನನಗೆ ಪಾಸಿಟಿವ್ ಬಂದು ಬಿದ್ದಿದ್ದೇನಾ? ಉಸಿರಾಟ ನಿಂತಿದೆಯಾ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಬಳಿ ಏನು ಹೇಳಿದ್ದಾರೋ ಗೊತ್ತಿಲ್ಲ, ಅವರು ಹೇಳುವುದನ್ನು ಮತ್ತು ನಾನು ಹೇಳುವುದನ್ನು ಕೇಳಿಸಿಕೊಳ್ಳಿ. ಅವರು ಸರ್ಕಾರಿ ಅಧಿಕಾರಿಯಾಗಿದ್ದು ಏನು ತಾನೆ ಮಾಡಲು ಸಾಧ್ಯ?’ ಎಂದು ಪ್ರಶ್ನಿಸಿದರು.
ಸರ್ಕಾರದ ಆಡಳಿತದಲ್ಲಿ ಏನೇನಾಗುತ್ತಿದೆ ಎಂಬೆಲ್ಲ ಮಾಹಿತಿ ನಮಗೆ ಗೊತ್ತಿದೆ. ಅಲ್ಲಿರುವ ಮಂತ್ರಿಗಳು, ಅಧಿಕಾರಿಗಳು ನಮಗೆ ಮಾಹಿತಿ ನೀಡುತ್ತಿದ್ದಾರೆ. ನಿಮಗೆ ಮಾಹಿತಿ ಹೇಗೆ ಸಿಗುತ್ತದೋ, ಅದೇ ರೀತಿ ನಮಗೂ ಸಿಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೋವಿಡ್ ಹೆಚ್ಚಾದರೆ ಕಾಂಗ್ರೆಸ್ ಹೊಣೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ. ಸ್ಯಾನಿಟೈಸರ್, ಮಾಸ್ಕ್ ಬಳಸುತ್ತಿದ್ದೇವೆ. ಆದರೆ ರಾಮನಗರ ಜಿಲ್ಲೆಯಲ್ಲಿ ಎಷ್ಟು ಜನ ಐಸಿಯು, ವೆಂಟಿಲೇಟರ್ ನಲ್ಲಿದ್ದಾರೆ. ರಿಯಾಲಿಟಿ ಚೆಕ್ ಮಾಡಿ. ಕನಕಪುರದ ಆಕ್ಸಿಜನ್ ಕೇಂದ್ರಕ್ಕೆ ಇನ್ನು ಚಾಲನೆ ನೀಡಿಲ್ಲ ಎಂದು ಆರೋಪಿಸಿದರು.
ಸರ್ಕಾರದವರು ರಾಜಕೀಯಕ್ಕಾಗಿ ಜನರನ್ನು ಸಾಯಿಸಲು ಹೊರಟಿದ್ದಾರೆ. ಅನೇಕ ವ್ಯಾಪಾರ ಬಂದ್ ಆಗಿದೆ. ಆಮೂಲಕ ಅವರ ಜೀವನವನ್ನೇ ಮುಗಿಸುತ್ತಿದ್ದಾರೆ. ಜೀವನ ಮುಗಿದ ಮೇಲೆ ಜೀವ ಇದ್ದು ಏನು ಸುಖ? ಅವರನ್ನು ಬದುಕಿರುವಾಗಲೇ ಸಾಯಿಸುತ್ತಿದ್ದಾರೆ ಎಂದು ಟೀಕಿಸಿದರು.