ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಷ್ಟಾವಧಿ ಧರಣಿ 11ನೇ ಪೂರೈಸಿದ್ದರೆ, ಅಹೋರಾತ್ರಿ ಧರಣಿ ಎರಡು ದಿನವನ್ನು ಪೂರೈಸಿದೆ. ಸರ್ಕಾರ ವಿಧಿಸಿರುವ ವಾರಾಂತ್ಯ ಲಾಕ್ ಡೌನ್ ಮತ್ತು ಕರ್ಪ್ಯೂ ನಡುವೆಯೇ ಕೊವಿಡ್ ನಿಯಮಗಳನ್ನು ಪಾಲಿಸುತ್ತಲೇ ನಾಲ್ವರು ಅತಿಥಿ ಉಪನ್ಯಾಸಕರು ಇಡೀ ರಾತ್ರಿ ನಡುಗುವ ಚಳಿಯಲ್ಲೇ ತಮ್ಮ ಬೇಡಿಕೆಗಳ ಈಡೇರಿಕೆಗೆ ಧರಣಿ ಮುಂದುವರೆಸಿದ್ದಾರೆ.
ಅತಿಥಿ ಉಪನ್ಯಾಸಕರ ಬೇಡಿಕೆಗಳ ಈಡೇರಿಕೆಗೆ ರಚಿಸಿದ್ದ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿದ್ದು ಅತಿಥಿ ಉಪನ್ಯಾಸಕರಿಗೆ ಗೌರವಧನ ಹೆಚ್ಚಿಸುವ ಕುರಿತು ಸಚಿವರು ಮತ್ತು ಮುಖ್ಯಮಂತ್ರಿ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಅತಿಥಿ ಉಪನ್ಯಾಸಕರು ಕೊವಿಡ್ ನಿಯಮಗಳನ್ನು ಪಾಲಿಸಿ, ಆರು ಅಡಿ ದೈಹಿಕ ಅಂತರ, ಸ್ಯಾನಿಟೈಸರ್ ಬಳಕೆ ಮತ್ತು ಕರ್ಪ್ಯೂ ನಿಯಮಗಳ ಪ್ರಕಾರವೇ ಕಳೆದ ರಾತ್ರಿ ನಾಲ್ವರು ಅತಿಥಿ ಉಪನ್ಯಾಸಕರು ಧರಣಿ ಮುಂದುವರೆಸಿದ್ದಾರೆ. ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.
ಲಾಕ್ ಡೌನ್ ಮತ್ತು ವಾರಾಂತ್ಯ ಕರ್ಪ್ಯೂ ಇದ್ದರೂ ಕೂಡ ಕೊವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಹೋರಾಟ ಮುಂದುವರಿಸಿದ್ದೇವೆ. ಪೊಲೀಸರು ಕೂಡ ನಮಗೆ ಸಹಕಾರ ನೀಡುತ್ತಿದ್ದಾರೆ. ರಾತ್ರಿ ಬಂದು ನಮ್ಮ ಆರೋಗ್ಯ ವಿಚಾರಿಸಿಕೊಂಡು ಹೋದರು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಅತಿಥಿ ಉಪನ್ಯಾಸಕರ ಸಂಘದ ಸದಸ್ಯ ಜಿ.ಕೆ.ನಾಗಣ್ಣ ತಿಳಿಸಿದ್ದಾರೆ.
ಈಗಾಗಲೇ ಅತಿಥಿ ಉಪನ್ಯಾಸಕರ ನ್ಯಾಯಯುತ ಹೋರಾಟಕ್ಕೆ ಕಾರ್ಮಿಕ, ರೈತ, ದಲಿತ, ಕನ್ನಡಪರ ಸಂಘಟನೆಗಳು ಮತ್ತು ಮಹಿಳಾ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷದ ಜನಪ್ರತಿನಿಧಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.
ಶಾಂತಿಯುತವಾಗಿ ಧರಣಿ ಮುಂದುವರೆಸಿರುವ ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು. ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸಕರ ನೆರವಿಗೆ ಬಂದು ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲು ಮುಂದಾಗಬೇಕೆಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.