ಪಂಜಾಬ್ ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ವೇಳೆ ಭದ್ರತಾ ಲೋಪವಾಗಿ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಆರೋಪಕ್ಕೆ ವಿರುದ್ಧವಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ.
ಸಾರ್ವಜನಿಕ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಬುಧವಾರ ಪ್ರಧಾನಿ ಮೋದಿ ಪಂಜಾಬ್ ಗೆ ಬಂದಿದ್ದರು. ಪ್ರತಿಕೂಲದ ಹವಾಮಾನ ಕಾರಣದ ನೆಪವೊಡ್ಡಿ ಫಿರೋಜ್ ಪುರದ ಹುಸೇನಿವಾಲಾಗೆ ರಸ್ತೆ ಮಾರ್ಗದಲ್ಲಿ ತೆರಳಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಫ್ಲೈಓವರ್ ನಲ್ಲಿ ತೆರಳುತ್ತಿದ್ದಾಗ ದಿಢೀರನೇ ರೈತರು ಮತ್ತು ವಾಹನಗಳು ನುಗ್ಗಿ ಪ್ರಧಾನಿ ಹತ್ಯೆಗೆ ಸಂಚು ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು.
ಆದರೆ ರೈತರು ಆ ರಸ್ತೆಯಲ್ಲಿ ಪ್ರತಿಭಟನೆಯನ್ನೇ ನಡೆಸಿರಲಿಲ್ಲ. ಬದಲಿಗೆ ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಬಿಜೆಪಿ ಮತ್ತು ಪ್ರಧಾನಿಗೆ ಜಯಕಾರ ಹಾಕುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ಬಿಜೆಪಿ ಹರಡಿದ ಸುದ್ದಿಗೂ ಈ ವಿಡಿಯೋದಲ್ಲಿನ ದೃಶ್ಯಗಳಿಗೂ ವ್ಯತ್ಯಾಸ ಇರುವುದು ಕಂಡುಬಂದಿದೆ. ಫ್ಲೈಓವರ್ ಮೇಲಿನ ರಸ್ತೆಯ ಒಂದು ಬದಿಯಲ್ಲಿ ಪ್ರಧಾನಿ ಕಾರು ಎಸ್.ಪಿ.ಜಿ ಭದ್ರತೆಯೊಂದಿಗೆ ನಿಂತಿದ್ದರೆ, ರಸ್ತೆಯ ಮತ್ತೊಂದು ಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಸಂಭ್ರಮಿಸುತ್ತಿರುವುದು ಮತ್ತು ಇತರೆ ವಾಹನಗಳು ಇರುವುದು ಕಂಡುಬಂದಿದೆ.
ಬಿಜೆಪಿಯ ಫಿರೋಜ್ ಪುರ ಸಾರ್ವಜನಿಕ ರ್ಯಾಲಿ ಸ್ಥಳದಲ್ಲಿ 70,000 ಕುರ್ಚಿಗಳನ್ನು ಹಾಕಲಾಗಿತ್ತು. ಆದರೆ 700 ಜನ ಮಾತ್ರ ಬಂದಿದ್ದರು, ಹೀಗಾಗಿ ಪ್ರಧಾನಿ ಕಾರ್ಯಕ್ರಮ ರದ್ದುಪಡಿಸಿ ದಿಢೀರ್ ರಸ್ತೆಯ ಮೂಲಕ ಪ್ರಯಾಣ ಬೆಳೆಸಿ, ಸಾವಿನಿಂದ ಪಾರು ಮಾಡಿದ ಪಂಜಾಬ್ ಸರ್ಕಾರಕ್ಕೆ ಧನ್ಯವಾದಗಳು ಎಂದು ಹೇಳಿದ್ದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.