ಸೇವಾ ಭದ್ರತೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಇದರ ನಡುವೆಯೇ ಶಿವಮೊಗ್ಗದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಅತಿಥಿ ಉಪನ್ಯಾಸಕರ ಪಾದಯಾತ್ರೆಯನ್ನು ತಡೆದಿರುವ ಪೊಲೀಸರು ಪಾದಯಾತ್ರೆ ಮುಂದೆ ತೆರಳದಂತೆ ಅಡ್ಡಿಪಡಿಸಿ ಬಂಧಿಸುವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತುಮಕೂರಿನ ಅಮಾನಿಕೆರೆಯ ಗಾಜಿನ ಮನೆಯ ಹಿಂಭಾಗದಲ್ಲಿ ಕಳೆದ 10 ದಿನಗಳಿಂದಲೂ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿಗೆ ತೃತೀಯ ಲಿಂಗಿಗಳು ಬೆಂಬಲ ನೀಡಿದ್ದಾರೆ. ತೃತೀಯ ಲಿಂಗಿಗಳ ಪರವಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಹಬಾಳ್ವೆ ಸಂಸ್ಥೆಯ ದೀಪಿಕಾ ಸರ್ಕಾರ ಧರಣಿ ನಿರತರ ಬಗ್ಗೆ ಸೂಕ್ತ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಅತಿಥಿ ಉಪನ್ಯಾಸಕರು ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಅವರಿಗೆ ಗಂಟೆಗೆ 1500 ರೂ ವೇತನ ಕೊಡಬೇಕು. ರಾಜ್ಯದಲ್ಲಿ 14,556 ಅತಿಥಿ ಉಪನ್ಯಾಸಕರಿದ್ದು ಅವರ ಸೇವೆಯನ್ನು ಖಾಯಂ ಮಾಡಬೇಕು. ಅವರ ಬೇಡಿಕೆಗಳನ್ನು ಈಡೇರಿಸುವಂತೆ ನಾವು ಧರಣಿಗೆ ಬೆಂಬಲ ನೀಡಿದ್ದೇವೆ ಎಂದು ದೀಪಿಕ ಹೇಳಿದರು.
ಉಸ್ತುವಾರಿ ಸಚಿವರ ಹೇಳಿಕೆಗೆ ಖಂಡನೆ:
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಜನವರಿ 5ರಂದು ಅತಿಥಿ ಉಪನ್ಯಾಸಕರು ದೇಶಸೇವೆ ಮಾಡಬೇಕು ಎಂಬ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಹೊಟ್ಟೆಗೆ ಇಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎನ್ನುವಂತೆ ಸಚಿವರು ಮಾತನಾಡಿದ್ದಾರೆ. ಕಡಿಮೆ ಕೆಲಸಕ್ಕೆ ಇಲ್ಲವೇ ಬಿಟ್ಟಿ ದುಡಿಯುವುದೇ ದೇಶ ಸೇವೆ ಎನ್ನುವುದಾದರೆ ಸಚಿವರ ಸಾರಿಗೆ, ವೇತನ, ಖರ್ಚು ವೆಚ್ಚ ಎಷ್ಟು? ಅವರಿಗೇಕೆ ಅಷ್ಟೊಂದು ಹಣ? ಅವರೇ ಹೇಳಿದಂತೆ ದೇಶಸೇವೆ ಮಾಡಬೇಕಲ್ಲವೇ? ಎಂದು ಅತಿಥಿ ಉಪನ್ಯಾಸಕರು ಪ್ರಶ್ನಿಸಿದ್ದಾರೆ.
ನೂತನ ಶಿಕ್ಷಣ ನೀತಿ ಜಾರಿಗೊಳಿಸುವ ಹುಮ್ಮಸ್ಸಿನಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆ ಕಾರ್ಯಕ್ರಮ ಯಶಸ್ವಿಗೊಳಿಸುವ ಅತಿಥಿ ಉಪನ್ಯಾಸಕರ ಬಗ್ಗೆ ಅಸಡ್ಡೆ ಏಕೆ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಹೋದರೆ ಅಹೋರಾತ್ರಿ ಹೋರಾಟಕ್ಕೂ ಸಿದ್ದ. ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಧರಣಿ ನಿರತ ಅತಿಥಿ ಉಪನ್ಯಾಸಕರು ತಿಳಿಸಿದರು.