ಪಂಜಾಬ್ ನಲ್ಲಿ ಪ್ರಧಾನಿ ಭೇಟಿ ವೇಳೆ ಭದ್ರತಾಲೋಪ ಉಂಟಾಗಿದೆ ಎಂದು ಕೇಂದ್ರ ಸರ್ಕಾರ, ಬಿಜೆಪಿ ಮುಖಂಡರು ಬಾಯಿಗೆ ಬಂದಂತೆ ಮಾತನಾಡಿ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ದಲಿತ ಮುಖ್ಯಮಂತ್ರಿಗೆ ಕೆಟ್ಟಹೆಸರು ತರಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಲೋಕಸಭೆಯಲ್ಲಿ ನಾಯಕರಾಗಿರುವ ಎಂ.ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಪಂಜಾಬ್ ನಲ್ಲಿ ಮೊದಲ ಬಾರಿಗೆ ದಲಿತ ನಾಯಕ ಚರಂಜಿತ್ ಸಿಂಗ್ ಚನ್ನಿ ಮುಂಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದು ಸರಳ, ಸಜ್ಜನ ಹಾಗೂ ಮೃಧು ಭಾಷಿಯಾಗಿದ್ದಾರೆ. ಅವರ ನೇತೃತ್ವದ ಸರ್ಕಾರವನ್ನು ಕೆಳಗಿಳಿಸಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ದೂರಿದರು.
ಭದ್ರತಾಲೋಪ ಕೇಂದ್ರ ಸರ್ಕಾರದ ಜವಾಬ್ದಾರಿ. ಗುಪ್ತಚರ, ಎಸ್.ಪಿ.ಜಿ ಹಾಗೂ ಅಧಿಕಾರಿಗಳ ತಂಡ ಪ್ರಧಾನಿ ಭೇಟಿಗೂ ಮೊದಲೇ ಸ್ಥಳಕ್ಕೆ ಹೋಗಿ ಪರಿಶೀಲಿಸುವುದು ಅದರ ಕರ್ತವ್ಯ. ಪ್ರಧಾನಿ ಹೆಲಿಕಾಪ್ಟರ್ ಇಳಿಯುವ ಸ್ಥಳ, ಸಭೆ ನಡೆಯುವ ಜಾಗ, ವೇದಿಕೆಯಲ್ಲಿ ಯಾರು ಇರಬೇಕು ಎಂಬ ಮಾರ್ಗಸೂಚಿಗಳು ಇವೆ. ಹೀಗಿದ್ದರೂ ಭದ್ರತಲೋಪವಾಗಿದೆ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದರು.
ಕೇಂದ್ರದ ಕಳುಹಿಸಿದ ಕಾರ್ಯಕ್ರಮದ ಪಟ್ಟಿಗನುಗುಣವಾಗಿ ಪ್ರಧಾನಿ ಪ್ರಯಾಣ ಮಾಡಿಲ್ಲ. ಫಿರೋಜ್ ಪುರದಲ್ಲಿ ಸಮಾವೇಶ ನಿಗದಿಯಾಗಿತ್ತು. 75 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇತ್ತು. ಆದರೆ, ಅಲ್ಲಿ 700 ಜನ ಮಾತ್ರ ಇದ್ದರು. ಆದರೆ ಪೊಲೀಸ್ ದಾಖಲೆ 5 ಸಾವಿರ ಜನ ಇದ್ದರು ಎಂದು ಹೇಳುತ್ತದೆ. ಭದ್ರತೆಗಾಗಿ ನಿಯೋಜಿಸಿದ್ದ ಪೊಲೀಸರೇ 4-5 ಸಾವಿರ ಜನ ಇದ್ದರು ಎಂದು ಮಾಹಿತಿ ನೀಡಿದರು.
ಕಾರ್ಯಕರ್ತರು ಸಂಖ್ಯೆ ಕಡಿಮೆ ಇರುವುದನ್ನು ಖಚಿತಪಡಿಸಿಕೊಂಡ ಪ್ರಧಾನಿ ಕಾರ್ಯಕ್ರಮ ಮೊಟಕುಗೊಳಿಸಿ ಸಭೆಯನ್ನು ರದ್ದುಪಡಿಸಿ ಹೊರಟರು. ಕಾರ್ಯಕರ್ತರು ಸಮಾವೇಶಕ್ಕೆ ಬಾರಲಿಲ್ಲ ಎಂಬ ಸಿಟ್ಟನ್ನು ಪಂಜಾಬ್ ಸರ್ಕಾರದ ಮೇಲೆ ಹಾಕಿದ್ದಾರೆ. ಹೆಲಿಕಾಪ್ಟರ್ ನಲ್ಲಿ ಹೋಗಬೇಕಾದವರು ರೈಲಿನಲ್ಲಿ ಹೋಗಲು ತೀರ್ಮಾನಿಸಿದ್ದು ಏಕೆ ಎಂದು ಪ್ರಶ್ನಿಸಿದರು.
ಗುಪ್ತಚರ ನಿರ್ದೇಶಕರು ಸ್ಥಳೀಯ ಪರಿಸ್ಥಿತಿಯ ಬಗ್ಗೆ ಸೂಕ್ತ ಮಾಹಿತಿ ನೀಡಿದ್ದರೂ ಅದನ್ನು ನಿರ್ಲಕ್ಷಿಸಿ ಪ್ರಯಾಣಿಸಿ ನಂತರ ಸಮಾವೇಶಕ್ಕೆ ಕಾರ್ಯಕರ್ತರು ಸೇರಿಲ್ಲ ಎಂಬ ಬಗ್ಗೆ ತಿಳಿದೂ 10 ಕಿ.ಮೀ ಮುಂದೆ ಹೋಗಿ, ರಸ್ತೆ ತಡೆದರು, ವಾಪಸ್ ಬರುತ್ತಿರುವುದಾಗಿ ಪ್ರಧಾನಿ ಹೇಳಿದ್ದನ್ನು ಎಲ್ಲರೂ ನೋಡಿದ್ದಾರೆ ಎಂದರು.
ಪ್ರಧಾನಿ ರಸ್ತೆಯಲ್ಲಿ ಹೋಗುವುದಾದರೆ ಮೊದಲು ಪರಿಶೀಲನೆ ನಡೆಯುತ್ತದೆ. ನಂತರವೇ ಎಸ್.ಪಿ.ಜಿ ಭದ್ರತೆಯೊಂದಿಗೆ ಪ್ರಧಾನಿ ತೆರಳುವರೆಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಅನಗತ್ಯ ವಿವಾದ ಸೃಷ್ಟಿಸಿ ಜನರಲ್ಲಿ ಗೊಂದಲ ಮೂಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಓಟಿಗಾಗಿ ಬಿಜೆಪಿ ಭಾವನಾತ್ಮಕ ಆರೋಪ ಮಾಡುವುದು ಸರಿಯಲ್ಲ. ಪ್ರಧಾನಿಗೆ ರಕ್ಷಣೆ ನೀಡುವುದು ನಮ್ಮ ಸರ್ಕಾರದ ಕರ್ತವ್ಯ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಚನ್ನಿ ಬಗ್ಗೆ ನಾನು ಪಾರಾಗಿರುವುದಕ್ಕೆ ಧನ್ಯವಾದ ತಿಳಿಸಿ ಎಂದು ವ್ಯಂಗ್ಯ ಮತ್ತು ಬಿಜೆಪಿ ಮುಖಂಡರು ಪಂಜಾಬ್ ರಾಜ್ಯ ಮತ್ತು ಮುಖ್ಯಮಂತ್ರಿಗೆ ಅಪಮಾನ ಮಾಡಿರುವುದು ಖಂಡನೀಯ ಎಂದರು.
ಇದು ಉದ್ದೇಶಪೂರ್ವಕ ಘಟನೆ. ರೈತರು ಪ್ರತಿಭಟನೆ ನಡೆಸುತ್ತಿದ್ದ ಮಾಹಿತಿ ಇದ್ದರೂ ರಸ್ತೆ ಮೂಲಕ ಪ್ರಯಾಣ ಮಾಡಿದ್ದು ಯಾಕೆ? ಅಪಪ್ರಚಾರ ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.


