ಬಿಜೆಪಿಯವರು ಕೇವಲ ರಾಜ್ಯಾದ್ಯಂತ ಅಲ್ಲ, ಇಡೀ ದೇಶಾದ್ಯಂತ ಪ್ರತಿಭಟನೆ ಮಾಡಲಿ, ಸಮಸ್ಯೆ ಏನಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಚಿವರು ಆಡಿರುವ ನುಡಿಮುತ್ತಗಳನ್ನು ಬಿಜೆಪಿ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು, ಆರ್. ಅಶೋಕ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಪ್ರಮಾಣೀಕರಿಸಿ ಸಮರ್ಥಿಸಿಕೊಂಡಿದ್ದಾರೆ. ಅವರಿಗೆ ಇನ್ನಷ್ಟು ಬಿರುದು, ಬಡ್ತಿ ನೀಡಲಿ. ಅವರ ಸಂಸ್ಕೃತಿಯ ದರ್ಶನ ಎಲ್ಲರಿಗೂ ಗೊತ್ತಾಗಿದೆ ಎಂದು ಕಿಡಿಕಾರಿದರು.
ಆರೋಗ್ಯ ಸಚಿವ ಸುಧಾಕರ್ ಕೊರೋನಾ ಹಿನ್ನೆಲೆಯಲ್ಲಿ ಪಾದಯಾತ್ರೆ ನಿಲ್ಲಿಸಲು ಮನವಿ ಮಾಡುತ್ತೇನೆ ಎಂಬ ಹೇಳಿಕೆಗೆ ಉತ್ತರಿಸಿದ ಡಿಕೆಶಿ ಬಹಳ ಸಂತೋಷ, ಅವರು ತಮಗೆ ಸಿಕ್ಕಿರುವ ಜವಾಬ್ದಾರಿ ಬಳಸಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಣವನ್ನು ವಸೂಲಿ ಮಾಡಿಕೊಂಡು ಬರಲಿ. ಜನರಿಗೆ ಸಹಾಯ ಮಾಡಲಿ ಸಾಕು ಎಂದು ಗೇಲಿ ಮಾಡಿದರು.
ಕೊರೋನಾ ತಡೆದರೋ ಇಲ್ಲವೋ ಎಂಬ ಚರ್ಚೆ ಬೇಡ. ಕೊರೋನಾ ವಿಚಾರವಾಗಿ ವಿಮಾನ ನಿಲ್ದಾಣದಲ್ಲಿ ಯಾವ ರೀತಿ ಕಿರುಕುಳ ನೀಡಲಾಗುತ್ತಿದೆ ಎಂಬುದನ್ನು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಲಿ. ಸುಧಾಕರ್ ಅವರು ಮೊದಲು ಅಲ್ಲಿಗೆ ಹೋಗಿ ನೋಡಲಿ. ನಮ್ಮ ಪಾದಯಾತ್ರೆ ಅದರ ಪಾಡಿಗೆ ನಡೆಯುತ್ತದೆ ಎಂದು ತಿಳಿಸಿದರು.
ಬಿಜೆಪಿಯವರು ಈಗಾಗಲೇ ನಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ಬಿಜೆಪಿಯವರು ಕೋವಿಡ್ ಸಮಯದಲ್ಲಿ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದ್ದರೂ ಯಾಕೆ ಅವರ ವಿರುದ್ಧ ಸಮನ್ಸ್ ಜಾರಿ ಮಾಡಿ, ಪ್ರಕರಣ ದಾಖಲಿಸಿಲ್ಲ? ಸಚಿವರ ಮೇಲೆ ಪ್ರಕರಣ ಯಾಕಿಲ್ಲ? ಎಂದು ಪ್ರಶ್ನಿಸಿದರು.
100 ನಾಟೌಟ್ ಪ್ರತಿಭಟನೆ ಮಾಡಿದ ನಮ್ಮೆಲ್ಲ ನಾಯಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನೂರು ಪ್ರಕರಣ ದಾಖಲಿಸಿ, ನಮ್ಮನ್ನು ನೂರು ಬಾರಿ ಜೈಲಿಗೆ ಕಳುಹಿಸಿದರೂ ನಾವು ಹೆದರುವುದಿಲ್ಲ. ರಾಜ್ಯದ ಜನರ ಪರವಾಗಿ, ಅವರ ಧ್ವನಿಯಾಗಿ ನಾವು ಹೋರಾಟ ಮಾಡುತ್ತೇವೆ ಎಂದರು.
ರಾಮನಗರ ರಿಪಬ್ಲಿಕ್ ಆಗಲು ಬಿಡುವುದಿಲ್ಲ ಎಂಬ ಅಶ್ವಥ್ ನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಅದಕ್ಕೆ ಉತ್ತರ ನೀಡಲು ಜನರಿದ್ದಾರೆ ಎಂದು ಹೇಳಿದರು.