ಇದು ಕೋವಿಡ್ ಲಾಕ್ ಡೌನ್ ಅಲ್ಲ, ಬಿಜೆಪಿಯ ಕರ್ಫ್ಯೂ ಮತ್ತು ಲಾಕ್ ಡೌನ್. ಬಿಜೆಪಿ ರಾಜಕಾರಣ ಮಾಡಲು ಟಫ್ ಆಗಿದ್ದು ಜನರೂ ಕೂಡ ಅಷ್ಟೇ ಟಫ್ ಆಗಿ ಉತ್ತರ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದೇ ದಿನ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸೋಂಕಿತರ ಸಂಖ್ಯೆ 2 ರಿಂದ 3 ಸಾವಿರಕ್ಕೆ ಏರಿದೆ ಎಂದು ಸರ್ಕಾರ ಹೇಳುತ್ತಿದೆ. ಇದಕ್ಕೆ ಪಟ್ಟಿ ಕೊಟ್ಟರೆ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ ಎಂದರು.
ನಮ್ಮದು ನೀರಿಗಾಗಿ ನಡಿಗೆ. ವಾಕ್ ಫಾರ್ ದಿ ವಾಟರ್. ನಾವು ನೀರಿಗಾಗಿ ನಡೆಯುತ್ತೇವೆ ಅಷ್ಟೇ. ಜನರ ಹಿತಕ್ಕಾಗಿ, ಕುಡಿಯುವ ನೀರಿಗೆ, ಜನರ ಭಾವನೆ, ಧ್ವನಿಗಾಗಿ, ರೈತರ ರಕ್ಷಣೆಗಾಗಿ ಬೆಂಗಳೂರಿನ ನಾಗರಿಕರಿಗಾಗಿ ನಾವು ಮನವಿ ಮಾಡುತ್ತಿದ್ದೇವೆ. ನಮ್ಮದು ಹೋರಾಟವಲ್ಲ ಮನವಿ. ಸರ್ಕಾರ ನಿರ್ಬಂಧ ಎಂದು ನೋಟೀಸ್ ಜಾರಿ ಮಾಡಿದ್ದಾರೆ. ನಾವು ರ್ಯಾಲಿ, ಧರಣಿ ಮಾಡುವುದಿಲ್ಲ. ನೀರಿಗಾಗಿ ನಡೆಯುತ್ತೇವೆ. ಅದನ್ನು ತಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಿ:
ಮೊದಲ ಅಲೆಯಲ್ಲಿ ಮಾರ್ಗಸೂಚಿ ಉಲ್ಲಂಘಿಸಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡಿದವರು, ಶ್ರೀರಾಮಲು, ಮದುವೆ, ಸಭೆ, ಸಮಾರಂಭಕ್ಕೆ ಹೋಗಿದ್ದ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ಮೊದಲು ಪ್ರಕರಣ ದಾಖಲಿಸಲಿ. ಜನಾಶೀರ್ವಾದ ಯಾತ್ರೆ ಮಾಡಿದ ಕೇಂದ್ರ ಬಿಜೆಪಿ ಸಚಿವರ ಮೇಲೆ ಪ್ರಕರಣ ದಾಖಲಿಸಲಿ. ಅದನ್ನು ಬಿಟ್ಟು ನನಗೆ ವಾರೆಂಟ್ ಕಳುಹಿಸಿದ್ದಾರೆ ಎಂದು ಕಿಡಿಕಾರಿದರು.
ನಾವು ಪಾದಯಾತ್ರೆ ಮಾಡುತ್ತಿಲ್ಲ. ನೀರಿಗಾಗಿ ನಡೆಯುತ್ತೇವೆ, ನೀರಿಗಾಗಿ ನಡೆಯಬಾರದೇ? ನಾವು ಮನೆಯಿಂದ ಯಾರು ಹೊರಬಂದು ಓಡಾಡಬಾರದೇ? ಸರ್ಕಾರ ಯಾರೂ ರಸ್ತೆಯಲ್ಲಿ ಓಡಾಡುವುದಿಲ್ಲವೇ? ಎಂದು ಮರುಪ್ರಶ್ನಿಸಿದರು.
ನೀರಿಗಾಗಿ ನಡಿಗೆಯಲ್ಲಿ ಯಾವ ಬದಲಾವಣೆಯೂ ಇಲ್ಲ. ಈಗಾಗಲೇ ನಮ್ಮ ಶಾಸಕಾಂಗ ಪಕ್ಷದ ನಾಯಕರು, ಕಾರ್ಯಾಧ್ಯಕ್ಷರು, ಬೆಂಗಳೂರು ನಗರ ಪ್ರದೇಶದ ನಾಯಕರ ಜತೆ ಚರ್ಚೆ ಮಾಡುತ್ತೇನೆ. ನಾವು ಕೋವಿಡ್ ಮಾರ್ಗಸೂಚಿ ಅನುಸರಿಸುತ್ತೇವೆ. ನಿಯಮ ಪಾಲಿಸುತ್ತೇವೆ. 100 ಜನ ವೈದ್ಯರ ತಂಡ ಅದಕ್ಕೆ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ವರ್ತಕರು, ವ್ಯಾಪಾರಸ್ಥರ ಮೇಲೆ ಗದಾಪ್ರಹಾರ ಮಾಡುತ್ತಿರುವುದನ್ನು ನೋಡಿ ಸಂಕಟವಾಗುತ್ತಿದೆ. ನಮ್ಮ ಮೇಲಿನ ದ್ವೇಷಕ್ಕೆ, ವರ್ತಕರು, ವ್ಯಾಪಾರಸ್ಥರು, ಪ್ರವಾಸೋದ್ಯಮದವರು, ಬೀದಿ ವ್ಯಾಪಾರಿಗಳಿಗೆ ಬರೆ ಹಾಕುತ್ತಿದೆ. ಸರ್ಕಾರ ಅವರನ್ನು ಹತ್ಯೆ ಮಾಡುತ್ತಿದೆ ಎಂದು ಆರೋಪಿಸಿದರು.