ಕ್ರಿಸ್ಮಸ್ ಆಚರಣೆಗೆ ಅಡ್ಡಿಪಡಿಸಿದ ಭಜರಂಗ ದಳದ ಕಾರ್ಯಕರ್ತರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬಿಳಿದೇವಾಲಯ ಗ್ರಾಮದಲ್ಲಿ ಡಿಸೆಂಬರ್ 28ರಂದು ನಡೆದಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಬಿಳಿದೇವಾಲಯದ ನಂದಿನಿ ಎಂಬ ಮಹಿಳೆಯ ಮನೆಗೆ ನುಗ್ಗಿದ ಭಜರಂಗ ದಳ ಕಾರ್ಯಕರ್ತರು ಮತಾಂತರ ಮಾಡುತ್ತಿದ್ದೀರ. ಇಷ್ಟೊಂದು ಮಹಿಳೆಯರನ್ನು ಸೇರಿಸಿಕೊಂಡು ಪ್ರಾರ್ಥನೆ ಮಾಡುತ್ತಿದ್ದೀರ. ನಿಲ್ಲಿಸಿ. ಇಲ್ಲದಿದ್ದರೆ ಸುಮ್ಮನಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಇದಕ್ಕೆ ಮನೆಯಲ್ಲಿದ್ದ ಮೂರ್ನಾಲ್ಕು ಮಹಿಳೆಯರು ನಾವು ಮತಾಂತರ ಮಾಡುತ್ತಿಲ್ಲ. ಕಷ್ಟ ಕಾಲದಲ್ಲಿ ನೀವು ನಮಗೆ ನೆರವಾಗಿದ್ದೀರ. ನಮ್ಮ ಮಟ್ಟಿಗೆ ನಾವು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೇವೆ. ಇಲ್ಲಿ ಮತಾಂತರ ನಡೆಯುತ್ತಿಲ್ಲ ಎಂದು ಹೇಳುತ್ತಿರುವ ಮಾತುಗಳು ವಿಡಿಯೋದಲ್ಲಿ ಕೇಳಿಬಂದಿದೆ.
ನೀವು ಹಣೆಯಲ್ಲಿ ಕುಂಕುಮ ಇಟ್ಟಿಲ್ಲ ಎಂದ ಭಜರಂಗ ದಳ ಕಾರ್ಯಕರ್ತರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುವ ಮಹಿಳೆಯರು ನಾವು ತಾಳಿ, ಕಾಲುಂಗರ ಹಾಕುವುದಿಲ್ಲ. ಅದನ್ನು ಕೇಳಲು ನೀವು ಯಾರು? ನಿಮಗೆ ಅಧಿಕಾರ ಕೊಟ್ಟವರ್ಯಾರು ಎಂದು ನಂದಿನಿ ಜೋರು ದನಿಯಲ್ಲಿ ಭಜರಂಗದಳ ಕಾರ್ಯಕರ್ತರಿಗೆ ಪ್ರಶ್ನಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ನೀವು ಹೊರಗೆ ಹೋದಾಗ ವಾರಗಟ್ಟಲೆ ಮುಖ ತೊಳೆಯುವುದಿಲ್ಲ. ನಾಮ ಇಕ್ಕಿಕೊಳ್ಳುವುದಿಲ್ಲ. ಇದನ್ನು ಯಾರೂ ಪ್ರಶ್ನಿಸುವುದಿಲ್ಲ. ಹಾಗಾದರೆ ನಮ್ಮನ್ನು ಏಕೆ ಪ್ರಶ್ನಿಸುತ್ತೀರ. ನಾವು ನಮ್ಮ ಮನಃಶಾಂತಿಗಾಗಿ ಪ್ರಾರ್ಥನೆ ಮಾಡುತ್ತೇವೆ. ಕೇವಲ ಚರ್ಚ್ ನಲ್ಲಿ ಮಾತ್ರ ಪ್ರಾರ್ಥನೆ ಮಾಡುವುದಿಲ್ಲ. ನಮ್ಮ ಮನೆಯಲ್ಲೂ ಪ್ರಾರ್ಥನೆ ಮಾಡಿಕೊಳ್ಳುತ್ತೇವೆ. ನೀವ್ಯಾರು ಕೇಳಲು ಎಂದು ಸಿಟ್ಟಿನಿಂದ ಪ್ರಶ್ನಿಸಿರುವುದು ಕೇಳಿಬಂದಿದೆ.