ಹೇ! ಶೂದ್ರ ತಪಸ್ವಿ……
ಬದುಕಿಗೆ ಬಂದಿಖಾನೆ ಕಟ್ಟಿದ
ಕಟ್ಟು ಕಟ್ಟಳೆಗಳ ಕತ್ತರಿಸಿ
ಬದನೆ ಶಾಸ್ತ್ರಗಳನು ಬಜಾರಿನಲಿ
ಬೆತ್ತಲೆ ನೇಣು ಹಾಕಿರುವೆವು
‘ಕರಿಸಿದ್ಧ’ನ ಪಿರಕದವರು ನಾವು
ಕರಿನೆಲದ ಹಾಡಿಗೆ ಪಲ್ಲವಿಯಾದವರು.
ನಮ್ಮದೇ ನೆತ್ತರೆಣ್ಣೆಯನೆರೆದು
ಜಗಕೆ ಕೈದೀವಿಗೆ ಹಿಡಿದು
ಆದಿ ಹಾಡಿನ ಆದಿಮ ರಾಗಗಳನ್ನು
ನಾಭಿ ನಾಡಿನಲಿ ಮೀಟಿ
ನೆಲದ ಮೊಳಕೆಯ ಕೊರಳಿಗೆ ತುಂಬಿ
ಗುಡುಗಾಗಿ ಗುಡುಗಿ ಗಿಡುಗನಂಗಳದಲ್ಲಿ
ಗೆಜ್ಜೆ ಕಟ್ಟಿ ಕುಣಿಯುವೆವು!
ನವಿಲುಗಣ್ಣಿನ ಕನಸು ಕಟ್ಟಿಕೊಂಡು
ಗುಂಡಿಗೆಯ ನೋವನೆ
ಅಗ್ನಿಕಾವ್ಯವಾಗಿ ಹಾಡಿ
ಕಾವ್ಯಖಡ್ಗದಲ್ಲಿ ಬೇನೆಗಳಿಗೆ ಮದ್ದು ನೀಡುವೆವು
‘ಹಳೆಮನೆ ಭೈರ’ನ ಮಲೆಯ ಮಕ್ಕಳು.
ಹೇ! ಶೂದ್ರ ತಪಸ್ವಿ…
ತ್ರಿಶೂಲ ಹಿಡಿದು ಬೆಳದಿಂಗಳ
ನೊರೆವಾಲುಗೆನ್ನೆಯ ಕೆಡಿಸಿ
ಮೆತ್ತಿಕೊಂಡು ರಕ್ತವನು
ಮಾನವೀಯತೆಯ ಮುಖಕ್ಕೆ ಮಸಿ ಬಳಿದು
ಗಟಾರಕ್ಕೆ ಬಿದ್ದ ರಾಮನನು
ಕೈಗೂಸಿನಂತೆ ಮಡಿಲೊಳಾಡಿಸಿ
ಕುಲಬೇನೆಯ ಸೂತಕ ಕಳೆವ
ಎದೆಹಾಲು ಕುಡಿಸಿದ ಅವ್ವ ನೀನು;
ಬರವಣಿಗೆ ಬದುಕನ್ನೆ ಕ್ರಾಂತಿಕಾವ್ಯವಾಗಿಸಿ
ಕಾಡುವ ನಿನ್ನ ಉಸಿರು
ನಮ್ಮ ಎದೆಕುಲುಮೆಯಲಿ
ತಿದಿಯೊತ್ತುತ್ತಿದೆ ಎಚ್ಚರದ ಜ್ವಾಲೆಯಾಗಿ!
ನಮ್ಮ ಕಣ್ಣ ಕತ್ತಲೆಗಿಳಿದ ನಿನ್ನ ಜ್ವಾಲೆ
ಕಣ್ಣೊಳಗಿನ ಬೆಳಕಾಗಿ
ಮುರುಕು ಗುಡಿಸಲಲ್ಲಿ
ಗುಂಡಿಗೆಯ ಗಾಯಗಳು ಕಣ್ಣೀರುಗರೆದು
ಕೆಂಪು ರಕ್ತದಿಂದ ಬರೆಯುವೆವು ನೋಡು
ಹಸಿರು ಕವಿತೆ;
ಬಂದೂಕದ ಬಾಯಿಗೆ ಎದೆಗೊಟ್ಟು ನಗುತ್ತದೆ ಕವಿತೆ
ಹೂವಿನಂತೆ!
ಹೇ! ಶೂದ್ರ ತಪಸ್ವಿ…
ಸೂರ್ಯನ ನೆತ್ತಿಗೆ ಗುದ್ದಿ
ಬೆಂಕಿ ಮಳೆಗರೆದು
ಉಲ್ಕೆಗಳ ಎಳೆತಂದು ದ್ರೋಣರಿಗಪ್ಪಳಿಸಿ
ಭೂಲೋಕಕೆ ಹಂಚಿ ಮಿಗುವಷ್ಟು
ಏಕಲವ್ಯನಿಗೆ ಪ್ರೀತಿಯುಣಿಸಿದ ಕವಿಯೇ
ಎಲ್ಲ ತತ್ವದೆಲ್ಲೆ ಮೀರಿ
ಬೆಟ್ಟದಂತೆ ನಿಂತ ನಿನ್ನ ಕಾವ್ಯವನು
ಅಖಂಡವಾಗಿ ತಬ್ಬಿಕೊಂಡವರು ನಾವು
ಜಲಗಾರನ ಮಕ್ಕಳು.
ನಮ್ಮ ಮೂಕರಾಗದ ಮಟ್ಟುಗಳಿಗೆ
ಸೀಮೆ ಎಲ್ಲೆಗಳಿಲ್ಲ
ಮತಭಾಷೆ, ಗಡಿದೇಶ ಮೊದಲಿಲ್ಲ.
ಕದ ಗೋಡೆಗಳಿಲ್ಲದ
ಹೆಸರಿರದ ಮನೆಗೆ ನಡೆಸುವ
ನಿನ್ನ ಹಾಡನು ಹಾಡುವ
‘ತಿಮ್ಮಿ’ಯ ನೆರಿಗೆ ಕಾವಿನ ಹಾಲುಂಡವರ
ಹಸಿರು ಕವಿತೆ ಆಕಾಶದೆತ್ತರಕ್ಕೆ ಬೆಳೆದು
ನಕ್ಷತ್ರಗಳ ನಗಿಸಿ
ನಭೋಮಂಡಲದಿಂದ ನರಮಂಡಲಕ್ಕೆ
ಬೆಳಕು ತಂದು
ಬತ್ತಿದೆದೆ ಚಿಲುಮೆಯಲಿ
ಉಕ್ಕಿಸುವುದು ಪ್ರೀತಿಯೊರತೆ
ಹತ್ತಿಸುವುದು ಬೆಳಕ ಹಣತೆ
ಮೂಡಿಸುವುದು ಕಣ್ಣೊಳಕೆ ಕಣ್ಣು
ನಿನ್ನ ಹಾಗೆ
ಹೇ! ಶೂದ್ರ ತಪಸ್ವಿ….
ಡಾ. ವಡ್ಡಗೆರೆ ನಾಗರಾಜಯ್ಯ, ಸಾಹಿತಿ, ವಿಮರ್ಶಕ