ಕೊವಿಡ್ ಪ್ರಕರಣಗಳ ತೀವ್ರ ಏರಿಕೆಯ ದೃಷ್ಟಿಯಿಂದ ರಾತ್ರಿ ಕರ್ಪ್ಯೂ ಹೇರಿಕೆ ಮಾಡಲಾಗಿದ್ದರೂ ಚುನಾವಣೆಗಳಿಗೆ ಒಳಪಡುವ ರಾಜ್ಯಗಳಲ್ಲಿ ಸಾರ್ವಜನಿಕ ರ್ಯಾಲಿಗಳಿಗೆ ನಿರ್ಬಂಧ ಏಕಿಲ್ಲ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಕೇಂದ್ರದ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರವು ರಾಜ್ಯಾದ್ಯಂತ ರಾತ್ರಿ ಕರ್ಪ್ಯೂ ಮರಳಿ ತಂದಿರುವ ಆದಿತ್ಯನಾಥ ಸರ್ಕಾರ ಕರ್ಪ್ಯೂ ಆದ್ಯತೆಗಳನ್ನು ಪ್ರಾಮಾಣಿಕವಾಗಿ ನಿರ್ಧರಿಸಬೇಕು ಎಂದು ಆಗ್ರಹಿಸಿದರು.
ರಾತ್ರಿಯಲ್ಲಿ ಕರ್ಪ್ಯೂ ಹೇರುವುದು ಮತ್ತು ಹಗಲಿನಲ್ಲಿ ಲಕ್ಷಾಂತರ ಜನರನ್ನು ರ್ಯಾಲಿಗಳಲ್ಲಿ ಸೇರಿಸುವುದು, ಇದು ಸಾಮಾನ್ಯ ಜನರ ಗ್ರಹಿಕೆಗೆ ಮೀರಿದೆ ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಸೀಮಿತ ಆರೋಗ್ಯ ವ್ಯವಸ್ಥೆ ಗಮನಿಸಿದರೆ ಒಮಿಕ್ರಾನ್ ಹರಡುವುದನ್ನು ತಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿರುವ ಗಾಂಧಿ ಚುನಾವಣೆಯ ಶಕ್ತಿ ಪ್ರದರ್ಶನ ನಮ್ಮ ಆದ್ಯತೆಯಾಗಿದೆಯೇ ಎಂಬುದನ್ನು ಪ್ರಾಮಾಣಿಕವಾಗಿ ನಿರ್ಧರಿಸಬೇಕು ಎಂದು ಬಿಜೆಪಿ ಸರ್ಕಾರಗಳ ವಿರುದ್ಧ ಟೀಕಾಪ್ರಹಾರ ನಡೆಸಿದರು.
ರಾತ್ರಿ ವೇಳೆ ರಸ್ತೆಯಲ್ಲಿ ಕಡಿಮೆ ಜನರು ಇರುವುದರಿಂದ ಗರಿಷ್ಠ ಹರಡುವಿಕೆಯು ಹಗಲಿನಲ್ಲಿ ಸಂಭವಿಸುತ್ತದೆ. ಕೊವಿಡ್ ಹೊರಹೊಮ್ಮುವ ಸಾಮಾಜಿಕ ಕೂಟಗಳನ್ನು ಕಡಿತಗೊಳಿಸಬೇಕು ಎಂದು ವರುಣ್ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಸರ್ಕಾರಗಳು ಕಟ್ಟುನಿಟ್ಟಾದ ಮತ್ತು ಪರಿಣಾಮಕಾರಿ ನಿಯಂತ್ರಣ ತಂತ್ರದ ಮೇಲೆ ಕೇಂದ್ರೀಕರಿಸಬೇಕು. ನೀತಿ ನಿರೂಪಕರು ಸರಿಯಾಗಿ ಮುನ್ನಡೆಸಬೇಕು, ಸಾಮಾನ್ಯ ಸಾರ್ವಜನಿಕರನ್ನು ಮನೆಯಲ್ಲಿಯೇ ಇರಲು ಪ್ರೇರೇಪಿಸಬೇಕು ಎಂದು ಸರ್ಕಾರಗಳಿಗೆ ಸಲಹೆ ನೀಡಿದ್ದಾರೆ.