ದೆಹಲಿಯ ಲೋಕನಾಯಕ ಆಸ್ಪತ್ರೆಯಲ್ಲಿ ದಾಖಲಾಗಿರುವ ಒಮಿಕ್ರಾನ್ ರೋಗಿಗಳಿಗೆ ಮಲ್ಟಿ ವಿಟಮಿನ್ ಮತ್ತು ಪ್ಯಾರಸಿಟಮಲ್ ಮಾತ್ರೆಗಳನ್ನು ಮಾತ್ರ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ದೆಹಲಿಯ ಎಲ್ಎನ್.ಜೆಪಿ ಆಸ್ಪತ್ರೆಯಲ್ಲಿ ಇದುವರೆಗೆ 40 ಹೊಸ ಕೊರೊನ ವೈರಸ್ ರೂಪಾಂತರ ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಹತ್ತೊಂಬತ್ತು ರೋಗಿಗಳು ಗುಣಮುಖವಾಗಿ ಡಿಸ್ ಚಾರ್ಜ್ ಆಗಿದ್ದಾರೆ. ಇವರಲ್ಲಿ ಶೇ.90ರಷ್ಟು ರೋಗಿಗಳಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಉಳಿದವರಲ್ಲಿ ಗಂಟಲು ನೋವು, ಜ್ವರ ಮತ್ತು ದೇಹನೋವು ಕಂಡು ಬಂದಿದೆ. ಇವು ರೋಗದ ಸೌಮ್ಯ ಲಕ್ಷಣಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ.
ರೋಗಿಗಳಿಗೆ ಮಲ್ಟಿವಿಟಮಿನ್ ಮತ್ತು ಪ್ಯಾರಸಿಟಮಾಲ್ ಮಾತ್ರೆಗಳನ್ನು ನೀಡಲಾಗಿದೆ. ಬೇರೆ ಯಾವುದೇ ಔಷಧ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಹೆಚ್ಚಿನ ರೋಗಿಗಳು ವಿದೇಶದಿಂದ ಬಂದ ನಂತರ ವಿಮಾನ ನಿಲ್ದಾಣದಲ್ಲಿ ಕೊವಿಡ್ ಪರೀಕ್ಷೆ ನಡೆಸಿದ್ದು ಕೊವಿಡ್ ಇರುವುದು ದೃಢಪಟ್ಟಿದೆ. ಅವರಲ್ಲಿ ಹೆಚ್ಚಿನವರು ಸಂಪೂರ್ಣ ಲಸಿಕೆ ಪಡೆದಿದ್ದಾರೆ. ಮೂರು-ನಾಲ್ಕು ಮಂದಿ ಬೂಸ್ಟರ್ ಲಸಿಕೆ ಪಡೆದಿದ್ದಾರೆ ಎಂದರು.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೆಹಲಿಯಲ್ಲಿ ಇದುವರೆಗೆ 67 ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ ಅದರಲ್ಲಿ 23 ಮಂದಿ ಬಿಡುಗಡೆಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸರ್ ಗಂಗಾ ರಾಮ್ ಸಿಟಿ ಆಸ್ಪತ್ರೆ, ಮ್ಯಾಕ್ಸ್ ಆಸ್ಪತ್ರೆ ಸಾಕೇತ್, ವಸಂತ್ ಕುಂಜ್‌ನಲ್ಲಿರುವ ಫೋರ್ಟಿಸ್ ಆಸ್ಪತ್ರೆ ಮತ್ತು ತುಘಲಕಾಬಾದ್‌ನ ಬಾತ್ರಾ ಆಸ್ಪತ್ರೆಗಳು ಒಮಿಕ್ರಾನ್ ಶಂಕಿತ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಸಿದ್ದತೆ ಮಾಡಿಕೊಂಡಿವೆ.