ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಭಾನುವಾರ ಇಬ್ಬರು ರಾಜಕೀಯ ಮುಖಂಡರ ಹತ್ಯೆಯಾಗಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಮಟ್ಟದ ನಾಯಕ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಬಿಜೆಪಿ ರಾಜ್ಯ ನಾಯಕನನ್ನು ಕೊಂದಿದ್ದಾರೆ.
ಅಲಪ್ಪುಳ ನಗರದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ವಕೀಲ ರಂಜಿತ್ ಶ್ರೀನಿವಾಸ್ ಮನೆಗೆ ನುಗ್ಗಿದ ಗುಂಪು ಬೆಳಗಿನ ವಾಕಿಂಗ್‌ಗೆ ತಯಾರಾಗುತ್ತಿದ್ದಾಗ ಅವರ ಮೇಲೆ ಹಲವು ಬಾರಿ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆಸಿ ಗುಂಪೊಂದು ಹಲ್ಲೆ ನಡೆಸಿದೆ. ದಾಳಿಕೋರರು ವಾಹನದಿಂದ ಕೆಳಗಿಳಿದು ಶಾನ್ ಅವರನ್ನು ಹಲವು ಬಾರಿ ಇರಿದಿದ್ದಾರೆ. ಕೂಡಲೇ ಅಲಪ್ಪುಳದ ಸ್ಥಳೀಯ ಆಸ್ಪತ್ರೆಗೆ, ನಂತರ ಕೊಚ್ಚಿಯ ಆಸ್ಪತ್ರೆಗೆ ಸಾಗಿಸಲಾಗಿ ಅವರು ಶನಿವಾರ ಮಧ್ಯರಾತ್ರಿಯಲ್ಲಿ ನಿಧನರಾದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಲಪ್ಪುಳದ ಹತ್ಯೆಗಳನ್ನು ಖಂಡಿಸಿದ್ದಾರೆ. ಹತ್ಯೆಕೋರರನ್ನು ಮತ್ತು ಘೋರ ಹತ್ಯೆಗಳ ಹಿಂದೆ ಕೆಲಸ ಮಾಡಿದವರನ್ನು ಬಂಧಿಸಲು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇಂತಹ ಅಪರಾಧ ಚಟುವಟಿಕೆಗಳು ಸಮಾಜಕ್ಕೆ ಹಾನಿಕರ ಎಂದರು.
ಆಲಪ್ಪುಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಜೈದೇವ್ ಮಾತನಾಡಿ, ಈ ಹತ್ಯೆಗಳಿಗೆ ನಡುವೆ ಪ್ರತೀಕಾರ ಇದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಹತ್ಯೆಗಳಿಗೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ನಾವು ಹಲವು ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಿದ್ದೇವೆ, ಆದರೂ ಭಾನುವಾರದ ಹತ್ಯೆ ತಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಎರಡು ದಿನ ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.
ಆಲಪ್ಪುಳ ಶಾಸಕ ಪಿ.ಪಿ.ಚಿತರಂಜನ್ ಮಾತನಾಡಿ, ಹತ್ಯೆಗಳು ಜನರನ್ನು ಬೆಚ್ಚಿಬೀಳಿಸಿವೆ, ಇಬ್ಬರೂ ತನಗೆ ವೈಯಕ್ತಿಕವಾಗಿ ಪರಿಚಿತರು ಎಂದು ಹೇಳಿದ್ದಾರೆ.