ದೇಶದಲ್ಲಿ ನಿರುದ್ಯೋಗ ಮತ್ತು ಹಣದುಬ್ಬರ ದೊಡ್ಡ ಪ್ರಶ್ನೆಗಳಾಗಿ ಕಾಡುತ್ತಿದ್ದರೂ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲೀ, ಪ್ರಧಾನಿಯಾಗಲಿ ಉತ್ತರ ನೀಡದೆ ಮೌನ ವಹಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಉತ್ತರ ಪ್ರದೇಶದ ಅಮೇಥಿಯಲ್ಲಿ ಮಾತನಾಡಿದ ರಾಹುಲ್, ನಿಮಗೆ ಇಂದಿನ ಪರಿಸ್ಥಿತಿ ಅರಿವಿದೆ. ಆದರೂ ನೀವು ಯಾವುದೇ ಪ್ರಶ್ನೆಗಳಿಗೂ ಉತ್ತರ ನೀಡುತ್ತಿಲ್ಲ ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ಪ್ರಧಾನಿ ಗಂಗಾ ಸ್ನಾನ ಮಾಡುತ್ತಿದ್ದರೇ ಹೊರತು ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡಲಿಲ್ಲ. ಆದರೂ ಯುವಕರು ಏಕೆ ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂಬುದನ್ನು ನಾನು ನಿಮಗೆ ಹೇಳುತ್ತೇನೆ. ಪ್ರಧಾನಿ ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಮಧ್ಯಮ ವರ್ಗದ ಜನರು ಮತ್ತು ಬಡವರು ಕೆಟ್ಟ ಪರಿಣಾಮ ಎದುರಿಸುವಂತೆ ಆಗಿದೆ ಎಂದು ದೂರಿದರು.
ನಿಮ್ಮ ನಿರ್ಧಾರಗಳು ದೊಡ್ಡ ಪ್ರಮಾಣದ ನಿರುದ್ಯೋಗಕ್ಕೂ ಕಾರಣವಾಯಿತು. ನೋಟು ಅಮಾನ್ಯೀಕರಣ, ಜಿಎಸ್.ಟಿ ಅವೈಜ್ಞಾನಿಕ ಜಾರಿ, ಕೊವಿಡ್ ಬಿಕ್ಕಟ್ಟನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದು ಮತ್ತು ಯಾರಿಗೂ ಸಹಾಯ ಮಾಡದೇ ಇರುವುದು ಭಾರತದಲ್ಲಿ ನಿರುದ್ಯೋಗಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಆರೋಪಿಸಿದರು.
ಗೋಡ್ಸೆ ಹಿಂದುತ್ವ ಮಾರ್ಗ ಅನುಸರಿಸಿದರೆ, ಮಹಾತ್ಮಗಾಂಧಿ ನಿಜವಾದ ಹಿಂದೂವಾಗಿ ಕೆಲಸ ಮಾಡಿದರು. ಹಿಂದೂ ಸತ್ಯದ ಮಾರ್ಗವನ್ನು ಮಾತ್ರ ಅನುಸರಿಸುವ ವ್ಯಕ್ತಿ. ಆತ ಭಯವನ್ನು ಎಂದಿಗೂ ಹಿಂಸೆ, ದ್ವೇಷ ಮತ್ತು ಕೋಪಕ್ಕೆ ಪರಿವರ್ತಿಸುವುದಿಲ್ಲ. ಇದಕ್ಕೆ ಅತ್ಯುತ್ತಮ ನಿದರ್ಶನ ಮಹಾತ್ಮ ಗಾಂಧಿ ಎಂದು ಪ್ರತಿಪಾಸಿದರು.
ಮಹಾತ್ಮ ಗಾಂಧಿ ತಮ್ಮ ಜೀವನದ ಉದ್ದಕ್ಕೂ ಸತ್ಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಗೋಡ್ಸೆ ಹಿಂದುತ್ವವಾದಿ. ಹಾಗಾಗಿ ಆತನನ್ನು ಮಹಾತ್ಮ ಎಂದು ಯಾರೂ ಕರೆಯುವುದಿಲ್ಲ. ಆತ ಯಾವಾಗಲೂ ಸತ್ಯ ಮಾತನಾಡುವ ಹಿಂದೂವನ್ನು ಕೊಂದ ಗೋಡ್ಸೆ ಒಬ್ಬ ಹೇಡಿ, ದುರ್ಬಲ ವ್ಯಕ್ತಿ. ಅವನು ತನ್ನ ಭಯವನ್ನು ಎದುರಿಸಲು ಸಾಧ್ಯವಾಗಲಿಲ್ಲ ಎಂದು ರಾಹುಲ್ ತಿಳಿಸಿದರು.
“ನಾನು 2004 ರಲ್ಲಿ ರಾಜಕೀಯಕ್ಕೆ ಬಂದೆ. ನನ್ನ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದ ನಗರ ಅಮೇಥಿ. ಅಮೇಥಿ ಜನರು ನನಗೆ ರಾಜಕೀಯದ ಬಗ್ಗೆ ಸಾಕಷ್ಟು ಕಲಿಸಿದರು. ನೀವು ನನಗೆ ರಾಜಕೀಯಕ್ಕೆ ದಾರಿ ತೋರಿಸಿದ್ದೀರಿ. ಹಾಗಾಗಿ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು.