ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಲ್ಗಾಮ್‌ನ ರೆಡ್ವಾನಿ ಗ್ರಾಮದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ನಿರ್ದಿಷ್ಟ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು, ಸೇನೆಯ 1ನೇ ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್.ಪಿಎಫ್ ನ 18 ಬೆಟಾಲಿಯನ್ ತಂಡ ಜಂಟಿ ಶೋಧ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಶೋಧ ಕಾರ್ಯಾಚರಣೆ ವೇಳೆ ಭಯೋತ್ಪಾದಕರ ಇರುವಿಕೆ ಖಚಿತವಾಗುತ್ತಿದ್ದಂತೆ, ಅವರಿಗೆ ಶರಣಾಗಲು ಹಲವು ಅವಕಾಶಗಳನ್ನು ನೀಡಲಾಯಿತು. ಆದರೂ ಭಯೋತ್ಪಾದಕರು ಪ್ರತೀಕಾರವಾಗಿ ಜಂಟಿ ಶೋಧ ತಂಡದ ಮೇಲೆ ಮನಬಂದಂತೆ ಗುಂಡು ಹಾರಿಸಿದರು ಎಂದು ತಿಳಿಸಿದ್ದಾರೆ.
ನಂತರದ ಎನ್‌ಕೌಂಟರ್‌ನಲ್ಲಿ ಎಲ್‌ಇಟಿಯ ಇಬ್ಬರು ಭಯೋತ್ಪಾದಕರು ಹತ್ಯೆಯಾಗಿದ್ದು ಅವರ ಶವಗಳನ್ನು ಎನ್‌ಕೌಂಟರ್ ಸ್ಥಳದಿಂದ ಪಡೆಯಲಾಗಿದೆ.
ಹತ್ಯೆಯಾಗಿರುವ ಭಯೋತ್ಪಾದಕರನ್ನು ಕುಜ್ಜರ್ ಫ್ರಿಸಾಲ್ ನಿವಾಸಿ ಅಮೀರ್ ಬಶೀರ್ ದಾರ್ ಮತ್ತು ಕುಲ್ಗಾಮ್‌ನ ಸುರ್ಸಾನೋ ಹತಿಪೋರಾ ನಿವಾಸಿ ಆದಿಲ್ ಯೂಸುಫ್ ಶಾನ್ ಎಂದು ಗುರುತಿಸಲಾಗಿದೆ.
ಹತ್ಯೆಗೀಡಾದ ಇಬ್ಬರೂ ಭಯೋತ್ಪಾದಕರು ಎಂದು ವರ್ಗೀಕರಿಸಲಾಗಿದೆ ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿ ಜೊತೆ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ ಭದ್ರತಾ ಪಡೆಗಳ ಮೇಲಿನ ದಾಳಿ ಮತ್ತು ನಾಗರಿಕ ಮೇಲೆ ದೌರ್ಜನ್ಯ ಸೇರಿ ಹಲವು ಭಯೋತ್ಪಾದಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಗುಂಪುಗಳ ಭಾಗವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದಕರಿಂದ ಎರಡು ಪಿಸ್ತೂಲ್, ಎರಡು ಮ್ಯಾಗಜೀನ್‌ಗಳು, ಏಳು ಜೀವಂತ ಗುಂಡುಗಳು ಮತ್ತು ಒಂದು ಗ್ರೆನೇಡ್ ಸೇರಿ ಹಲವು ಸಾಮಗ್ರಿಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.