ಕೇರಳದ ಮೆಟ್ರೋಮ್ಯಾನ್ ಎಂದೇ ಖ್ಯಾತರಾಗಿದ್ದ ಬಿಜೆಪಿ ಮುಖಂಡ ಇ.ಶ್ರೀಧರನ್ ರಾಜಕೀಯ ನಿವೃತ್ತಿ ಪಡೆದಿದ್ದಾರೆ. ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಂ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದ ಶ್ರೀಧರನ್ ಸೋಲು ಕಂಡ ನಮತರ ರಾಜಕೀಯಿಂದ ನಿವೃತ್ತಿ ಹೊಂದಿದ್ದಾರೆ.
ಶ್ರೀಧರನ್ ಅವರು ಮಲಪ್ಪುರಂನ ಪೊನ್ನಾನಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಸಂಪೂರ್ಣವಾಗಿ ರಾಜಕೀಯ ತ್ಯಜಿಸುತ್ತಿಲ್ಲ. ದೇಶ ಸೇವೆ ಮುಂದುವರೆಸುತ್ತೇನೆ. ಆದರೆ ಸಕ್ರಿಯ ರಾಜಕೀಯದ ಮೂಲಕ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನನಗೆ ಈಗ 90 ವರ್ಷ, ನನ್ನ ವಯಸ್ಸಿಗೆ ತಕ್ಕಂತೆ ನಾನು ಮುಂದುವರೆಯುತ್ತೇನೆ. ನಾನು ಸಕ್ರಿಯ ರಾಜಕೀಯ ತೊರೆಯುತ್ತಿದ್ದೇನೆ ಎಂದರೆ ನಾನು ರಾಜಕೀಯ ತೊರೆಯುತ್ತಿದ್ದೇನೆ ಎಂದರ್ಥವಲ್ಲ, ನಾನು ಚುನಾವಣೆಯಲ್ಲಿ ಸೋತಾಗ ನನಗೆ ದುಃಖವಾಯಿತು. ಆದರೆ, ಈಗ ನನಗೆ ಬೇಸರವಿಲ್ಲ ಏಕೆಂದರೆ ಒಬ್ಬ ಶಾಸಕನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಶ್ರೀಧರನ್ ಹೇಳಿದರು.
ಬಿಜೆಪಿ ಸೇರಿ ಚುನಾವಣೆಯಲ್ಲಿ ಸೋತ ನಂತರ ನಿವೃತ್ತಿ ಹೊಂದಿರುವ ಶ್ರೀಧರನ್, ನಾನು ಅಧಿಕಾರಿಯಾಗಿದ್ದರಿಂದ ಎಂದಿಗೂ ರಾಜಕಾರಣಿಯಾಗಿರಲಿಲ್ಲ. ನಾನು ಯಾವಾಗಲೂ ಇತರರ ರೀತಿಯಲ್ಲಿ ಜನರಿಗೆ ಸೇವೆ ಸಲ್ಲಿಸಬಲ್ಲೆ. ನನಗೆ ಮೂರು ಟ್ರಸ್ಟ್‌ಗಳಿವೆ ಮತ್ತು ನಾನು ಮಾಡಬೇಕಾದ ಕೆಲಸವಿದೆ ಎಂದು ಶ್ರೀಧರನ್ ಹೇಳಿದರು.
ಸಿಲ್ವರ್ಲೈನ್ ಸಿಲ್ವರ್‌ಲೈನ್ ಯೋಜನೆಯು ಸರಿಯಾಗಿ ಅನುಷ್ಠಾನಗೊಳ್ಳದಿದ್ದರೆ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ. ಯೋಜನೆಯಲ್ಲಿ ಗಂಭೀರ ತಪ್ಪುಗಳಿವೆ. ಇದು ಜನರ ಅಜ್ಞಾನದಿಂದಾಗಿರಬಹುದು. ಅವರು ಯೋಜನೆ ರೂಪಿಸುವ ಮೊದಲು ಪರಿಸರ ಅಧ್ಯಯನ ಸಹ ನಡೆಸಲಿಲ್ಲ. ಹಾಗಾಗಿ ಯೋಜನೆಯನ್ನು ಮರು ಯೋಜಿಸಬೇಕು ಎಂದು ಸಲಹೆ ನೀಡಿದರು.
ಯೋಜನೆಗೆ ಸರ್ಕಾರಗಳು ನೆರವು ಕೇಳಿದರೆ ಸಹಕಾರ ನೀಡುತ್ತೇನೆ. ಸಿಲ್ವರ್‌ಲೈನ್ ಯೋಜನೆ ಯಶಸ್ವಿಯಾಗಲು ವಿಸ್ತೃತ ಅಧ್ಯಯನ ನಡೆಸಬೇಕು. ಪ್ರಸ್ತುತ ಯೋಜನೆಯನ್ನು 55 ದಿನಗಳಲ್ಲಿ ಯೋಜಿಸಲಾಗಿದೆ. ಆದರೆ ವಿವರವಾದ ಯೋಜನಾ ವರದಿ ಪೂರ್ಣಗೊಳಿಸಲು ಕನಿಷ್ಠ ಎರಡು ವರ್ಷಗಳು ಬೇಕಾಗುತ್ತವೆ ಎಂದು ತಿಳಿಸಿದರು.