ಒಬ್ಬ ಸಚಿವರ ವಿರುದ್ಧ ಭ್ರಷ್ಠಾಚಾರದ ಆರೋಪ ಮಾಡಿದ ಮಾತ್ರಕ್ಕೆ ಹದಿನೈದು ಶಾಸಕರನ್ನು ಕಲಾಪದಿಂದ ಹೊರಗಿಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಇತಿಹಾಸ ಬರೆದಿದೆ. ಇದು ಯಾವ ಸರ್ಕಾರ? ಪ್ರಜಾಪ್ರಭುತ್ವ ಸರ್ಕಾರವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಏನಿದು? ನನಗೆ ಆಶ್ಚರ್ಯ ಎಂದರೆ ಹೊರಟ್ಟಿ ಅವರು 7 ಬಾರಿ ಪರಿಷತ್ತಿನಲ್ಲಿ ಗೆದ್ದವರು. ಅವರು ಸಭಾಪತಿಗಳು. ಅವರೇ ಹೀಗೆ ಮಾಡಿದರೆ ಹೇಗೆ? ಜನರ ಪರವಾಗಿ ಧ್ವನಿ ಎತ್ತಲು ನಾವು ಬಂದಿದ್ದೇವೆ. ಜನರ ಧ್ವನಿ, ಭಾವನೆ ಪರವಾಗಿ ನಾವು ಹೋರಾಡುತ್ತೇವೆ. ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂದರು.
ವಿಶ್ವ ಮಟ್ಟದಲ್ಲೇ ಅತಿ ದೊಡ್ಡ ಭ್ರಷ್ಟ ಸರ್ಕಾರ ಎಂದು ಗುತ್ತಿಗೆದಾರರ ಸಂಘ ಹೇಳಿದೆ. ಇದರಿಂದ ಗುಣಮಟ್ಟದ ಕೆಲಸ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದೆ. ಈ ಸರ್ಕಾರದ ವಿರುದ್ಧ ದಾಖಲೆಗಳೇ ಇವೆ. ತನಿಖೆ ನಡೆಸಿ ತಪ್ಪು ಮಾಡಿದ್ದರೆ ಕ್ರಮ ಜರುಗಿಸಿ ಎಂದು ಹೇಳಿದರು.
ಈ ಭಾಗದ ರೈತರ ಬೆಳೆಹಾನಿಗೆ ನಯಾಪೈಸೆ ಪರಿಹಾರ ಸಿಕ್ಕಿಲ್ಲ. ಕೇಂದ್ರದ ಅನುದಾನ ಕಾಯದೆ ಅವರಿಗೆ ಪರಿಹಾರ ನೀಡಿ, ಮನೆ ಕಟ್ಟಿಕೊಡಿ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅವರ ಮಾತಿಗೆ ನಾವು ಧ್ವನಿಗೂಡಿಸುತ್ತೇವೆ. ಇದುವರೆಗೂ ಒಬ್ಬರಿಗೂ ಒಂದು ಪೈಸೆ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದರು.
ಈಗಾಗಲೇ ಮತಾಂತರ ನಿಷೇಧ ಕಾಯ್ದೆ ಇದೆ. ಈಗ ಈ ಕಾಯ್ದೆ ಯಾಕೆ ಬೇಕು? ಬಿಜೆಪಿಯವರಿಗೆ ಮೇಲಿಂದ ಮೇಲೆ ಚುನಾವಣೆ ಸೋಲನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಇದನ್ನು ಮುಚ್ಚಿಕೊಳ್ಳಲು ಏನೇನೋ ಆಟ ಆಡುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ಸರ್ಕಾರ ಜನರನ್ನು ಭಾವನಾತ್ಮಕವಾಗಿ ದಾರಿತಪ್ಪಿಸಲು ಪ್ರಯತ್ನಿಸುತ್ತಿದೆ. ರಾಹುಲ್ ಗಾಂಧಿ ಹೇಳಿರುವಂತೆ ನಾವೆಲ್ಲಾ ಹಿಂದೂಗಳು. ಗಾಂಧಿ ಹಿಂದೂ, ರಾಮ ಹಿಂದೂ. ಆದರೆ ಬಿಜೆಪಿ ಅವರದ್ದು ಹಿಂದುತ್ವ. ರಾಮಾಯಣದಲ್ಲಿ ಬಹಳ ಪಾವಿತ್ರತೆ ಇರುವ ಸೀತೆಯ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.


