ದೇಶದಲ್ಲಿ ಯುವತಿಯರ ವಿವಾಹದ ಕನಿಷ್ಠ ಕಾನೂನಾತ್ಮಕ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ, ಪುರುಷರಿಗೆ ಮದುವೆಯ ಕಾನೂನುಬದ್ಧ ಕನಿಷ್ಠ ವಯಸ್ಸು 21 ವರ್ಷಗಳು ಮತ್ತು ಮಹಿಳೆಯರಿಗೆ 18 ವರ್ಷಗಳು ಇತ್ತು. ಜಯಾ ಜೇಟ್ಲಿ ನೇತೃತ್ವದ ನೀತಿ ಆಯೋಗ ಕಾರ್ಯಪಡೆಯ ಶಿಫಾರಸಿನ ಮೇರೆಗೆ ಹೊಸ ಪ್ರಸ್ತಾಪವನ್ನು ಮಾಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಆರೋಗ್ಯ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಗಳು ಕಳೆದ ವರ್ಷ ಜೂನ್‌ನಲ್ಲಿ ರಚಿಸಲಾದ ಕಾರ್ಯಪಡೆಯ ಸದಸ್ಯರಾಗಿದ್ದರು.
ತಾಯ್ತನದ ವಯಸ್ಸು, ತಾಯಿಯ ಮರಣ ಪ್ರಮಾಣ ಕಡಿಮೆ ಮಾಡುವ ಅಗತ್ಯತೆ, ಪೌಷ್ಟಿಕಾಂಶದ ಮಟ್ಟದ ಸುಧಾರಣೆ ಮತ್ತು ಸಂಬಂಧಿತ ಸಮಸ್ಯೆಗಳ ವಿಷಯಗಳನ್ನು ಪರಿಶೀಲಿಸಲು ಕಾರ್ಯಪಡೆ ರಚಿಸಲಾಗಿದೆ.
ಕೇಂದ್ರ ಸಚಿವ ಸಂಪುಟದ ಅನುಮೋದನೆಯ ನಂತರ ಸರ್ಕಾರವು ಬಾಲ್ಯ ವಿವಾಹ ನಿಷೇಧ ಕಾಯ್ದೆ, ವಿಶೇಷ ವಿವಾಹ ಕಾಯ್ದೆ ಮತ್ತು ಹಿಂದೂ ವಿವಾಹ ಕಾಯ್ದೆಗೆ ತಿದ್ದುಪಡಿ ತಂದು ಮಹಿಳೆಯರ ಕಾನೂನುಬದ್ಧ ವಿವಾಹ ವಯಸ್ಸನ್ನು ಹೆಚ್ಚಿಸುವ ಹೊಸ ನಿರ್ಧಾರ ಜಾರಿಗೆ ತರಲಿದೆ ಎಂದು ಮೂಲಗಳು ತಿಳಿಸಿವೆ.
ಲೈಂಗಿಕ ಶಿಕ್ಷಣವನ್ನು ಔಪಚಾರಿಕಗೊಳಿಸಬೇಕು ಮತ್ತು ಶಾಲಾ ಪಠ್ಯಕ್ರಮದಲ್ಲಿ ಪರಿಚಯಿಸಬೇಕು ಎಂದು ಕಾರ್ಯಪಡೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರ ಹೆಣ್ಣುಮಕ್ಕಳು ಮತ್ತು ಸಹೋದರಿಯರ ಆರೋಗ್ಯದ ಬಗ್ಗೆ ನಿರಂತರ ಕಾಳಜಿ ವಹಿಸುತ್ತದೆ. ಅವರನ್ನು ಅಪೌಷ್ಟಿಕತೆಯಿಂದ ರಕ್ಷಿಸಲು, ಅವರು ಸರಿಯಾದ ವಯಸ್ಸಿನಲ್ಲಿ ಮದುವೆಯಾಗುವುದು ಅವಶ್ಯಕ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


