ಲಖಿಂಪುರ ಖೇರಿಯಲ್ಲಿ ಪ್ರಕರಣದಲ್ಲಿ ಷಡ್ಯಂತ್ರ ರೂಪಿಸಿ ರೈತರ ಹತ್ಯೆ ಮಾಡಿದ ಸಚಿವ ಅಜಯ್ ಮಿಶ್ರಾ ಅವರು ಕೂಡಲೇ ರಾಜಿನಾಮೆ ನೀಡಬೇಕು ಮತ್ತು ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದರು.
ಲಖಿಂಪುರಖೇರಿ ಹತ್ಯಾಕಾಂಡ ಪೂರ್ವ ಯೋಜಿತ ಪಿತೂರಿ ಎಂದು ಎಸ್ಐಟಿ ವರದಿ ಸಲ್ಲಿಸಿದ ಬಳಿಕ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿ ಸಚಿವ ಅಜಯ್ ಮಿಶ್ರಾ ಟೆನಿ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದವು.
ಈ ಸಂದರ್ಭಧಲ್ಲಿ ಮಾತನಾಡಿ ರಾಹುಲ್ ಗಾಂಧಿ, ಲಖಿಂಪುರ ಖೇರಿಯಲ್ಲಿ ನಡೆದ ಹತ್ಯೆಯ ಬಗ್ಗೆ ಮಾತನಾಡಲು ಅವಕಾಶ ನೀಡಬೇಕು. ಅಲ್ಲಿ ಸಚಿವರ ಶಾಮೀಲಾಗಿದ್ದಾರೆ. ಹಾಗಾಗಿ ಸಚಿವರಿಂದ ರಾಜಿನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಪಕ್ಷ ಸದಸ್ಯರು ಮಿಶ್ರಾ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. ಅವರಲ್ಲಿ ಕೆಲವರು ಸಭಾಧ್ಯಕ್ಷರ ಮುಂದಿ ಬಾವಿಗೆ ನುಗ್ಗಿದರು. ಆಗ ಸಭಾಧ್ಯಕ್ಷ ಬಿರ್ಲಾ ಪ್ರತಿಪಕ್ಷದ ಸದಸ್ಯರಿಗೆ ಮನವರಿಕೆ ಮಾಡಲು ಯತ್ನಿಸಿದರು. ಸಮಸ್ಯೆ ಪ್ರಸ್ತಾಪಿಸಲು ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು.
ಆಗ ಲಖೀಂಪುರಖೇರಿ ಘಟನೆಗೆ ಕೇಂದ್ರ ಸಚಿವರೇ ಹೊಣೆ ಎಂದು ರಾಹುಲ್ ಗಾಂಧಿ ಪ್ರಸ್ತಾಪಿಸಿದರು. ಇದಕ್ಕೆ ಸಭಾಧ್ಯಕ್ಷರು ಅಡ್ಡಿಪಡಿಸಿದರು. ಅದೊಂದು ಪಿತೂರಿ ಎಂದು ಹೇಳಲಾಗಿದೆ. ರೈತರ ಹತ್ಯೆ ಮಾಡಿದ ಸಚಿವರು ರಾಜೀನಾಮೆ ನೀಡಿ ಶಿಕ್ಷೆ ಅನುಭವಿಸಬೇಕು ಎಂದು ರಾಹುಲ್ ಆಗ್ರಹಿಸಿದರು.
ಈ ನಡುವೆ ಪ್ರತಿಪಕ್ಷಗಳು ರಾಜ್ಯಸಭೆಯಲ್ಲೂ ಪ್ರತಿಭಟನೆ ನಡೆಸಿದವು. ಸದನಕ್ಕೆ ಹಾಜರಾಗುವಂತೆ ಕಾಂಗ್ರೆಸ್ ತನ್ನ ರಾಜ್ಯಸಭಾ ಸದಸ್ಯರಿಗೆ ವಿಪ್ ಜಾರಿ ಮಾಡಿದೆ. ನಾಳೆ ರಾಜ್ಯಸಭೆಯಲ್ಲಿ ಬಹಳ ಮುಖ್ಯವಾದ ವಿಷಯಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಪಕ್ಷದ ಮುಖ್ಯ ಸಚೇತಕ ಜೈರಾಮ್ ರಮೇಶ್ ಹೇಳಿದ್ದಾರೆ.