ಸ್ಥಳೀಯ ಸಂಸ್ಥೆಗಳಿಂದ ತುಮಕೂರು ವಿಧಾನಪರಿಷತ್ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬ್ಯಾಲೆಟ್ ಮತಗಳ ಎಣಿಕೆ ನಡೆಯುತ್ತಿದ್ದು, ಅರ್ಧಕ್ಕಿಂತ ಹೆಚ್ಚು ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆಯುವ ಅಭ್ಯರ್ಥಿ ಮೊದಲ ಹಂತದಲ್ಲೇ ಗೆಲುವು ಸಾಧಿಸುತ್ತಾರೆ. ಮೊದಲ ಪ್ರಾಶಸ್ತ್ಯ ಮತ ಗಳಿಕೆಯಲ್ಲಿ ಕಡಿಮೆಯಾದರೆ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ಮಾಡಬೇಕಾಗುತ್ತದೆ. ಹಾಗಾಗಿ ಫಲಿತಾಂಶ ಸಂಜೆಯ ವೇಳೆಗೆ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮೂರು ಪಕ್ಷಗಳ ಅಭ್ಯರ್ಥಿಗಳು ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು ಗೆಲ್ಲುತ್ತೇವೆಂಬ ವಿಶ್ವಾಸ ಇಲ್ಲ. ಆದರೆ ಮೂರು ಪಕ್ಷಗಳೂ ಎರಡನೇ ಪ್ರಾಶಸ್ತ್ಯದ ಮತಗಳ ಮೇಲೆ ಗೆಲ್ಲುವ ವಿಶ್ವಾಸವನ್ನು ಹೊಂದಿವೆ. ಎಂದಿನಂತೆ ಚುನಾವಣೆಯಲ್ಲಿ ಕುರುಡು ಕಾಂಚಣದ ಸದ್ದು ಜೋರಾಗಿ ನಡೆದಿದ್ದು, ಮತದಾನ ಶೇ.99.97ರಷ್ಟು ಆಗಿದೆ ಮಹಿಳಾ ಪ್ರತಿನಿಧಿಗಳ ಮತ ಪಡೆಯುವ ಅಭ್ಯರ್ಥಿ ಮೊದಲ ಪ್ರಾಶಸ್ತ್ಯದಲ್ಲೇ ಗೆಲ್ಲಬಹುದು.
ಮೂರು ಪಕ್ಷಗಳ ಅಭ್ಯರ್ಥಿಗಳು ಒಳಒಡೆತ ಎದುರಿಸಬೇಕಾಗಿರುವುದು ಖಚಿತ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್. ರಾಜೇಂದ್ರ ತಂದೆ ಕೆ.ಎನ್.ರಾಜಣ್ಣ ಅವರ ವಿರೋಧಿಗಳ ಮತಗಳನ್ನು ಪಡೆಯುವುದು ಕಷ್ಟವಾಗಬಹುದು. ಯಾಕೆಂದರೆ ಮಧುಗಿರಿ ಕ್ಷೇತ್ರದಲ್ಲಿ ಕೆ.ಎನ್.ಆರ್ ಅವರನ್ನು ಸೋಲಿಸಿದ ವ್ಯಕ್ತಿಗಳು ಇಲ್ಲಿಯೂ ಅವರ ವಿರುದ್ಧವಾಗಿ ಕೆಲಸ ಮಾಡಿದ್ದಾರೆಂಬುದು. ಹಾಗೆಯೇ ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ಕೊನೆ ಗಳಿಗೆಯಲ್ಲಿ ಪಕ್ಷದ ವರಿಷ್ಠರು ಕೈಕೊಟ್ಟ ಪರಿಣಾಮ ಮತ ಗಳಿಕೆಗೆ ಹೊಡೆತ ಬಿದ್ದಿದೆ. ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ ಹೊರಗಿನ ಅಭ್ಯರ್ಥಿ ಮತ್ತು ಪಕ್ಷದಲ್ಲೇ ಅವರಿಗೆ ಮನ್ನಣೆ ಸಿಕ್ಕಿಲ್ಲ.
ಹೌದು ಇವರಿಗೆ ಮನ್ನಣೆ ಇಲ್ಲದಿರಬಹುದು. ಆದರೆ ಸ್ವಲ್ಪಮಟ್ಟಿಗಿನ ಮತಗಳನ್ನು ಒಂದು ಕಡೆ ತಿರುಗಿಸುವ ಶಕ್ತಿಯಂತೂ ಇದ್ದೇ ಇದೆ. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡ, ಸಂಸದ ಜಿ.ಎಸ್.ಬಸವರಾಜು ಯಾರ ಪರವಾಗಿ ಕೆಲಸ ಮಾಡಿದ್ದಾರೆಂಬುದು ಲೋಕಕ್ಕೆ ಗೊತ್ತಿರುವ ಸಂಗತಿ. ಇವರ ನಡೆ ಯಾರ ಕಡೆಗೆ ಎಂಬುದು ಅರ್ಥವಾದರೆ ಅದು ಸ್ವಲ್ಪ ಮಟ್ಟಿಗೆ ಆರ್. ರಾಜೇಂದ್ರ ಅವರ ಗೆಲುವಿಗೆ ಸಹಕಾರಿಯಾಗಬಹುದು. ಕಾಂಗ್ರೆಸ್ ಕೂಡ ಇದೇ ವಿಶ್ವಾಸವನ್ನು ಹೊಂದಿದೆ.
ಆದರೆ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಆಯಾ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳಿಗೆ ತಲೆ ಕೊಡಬೇಕೆಂಬ ಅಭಿಪ್ರಾಯಗಳು ದಟ್ಟವಾಗಿವೆ. ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರು ಪಕ್ಷದ ವರಿಷ್ಠರನ್ನು ಬೈದುಕೊಂಡು ತಿರುಗುತ್ತಿರುವುದು ಕಂಡುಬರುತ್ತಿದೆ. ನಮ್ಮ ಪಕ್ಷದ ಲೀಡರ್ ಗಳೇ ಕೈಕೊಟ್ಟರು. ಅಪ್ಪ-ಮಕ್ಕಳ ಚಿತಾವಣೆಯಿಂದ ಅನಿಲ್ ಕುಮಾರ್ ಅವರನ್ನು ಬಲಿಹಾಕಿದರು ಎಂಬ ಆಕ್ರೋಶ ವ್ಯಕ್ತವಾಗಿದೆ.


