ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ನಾಗಾಲ್ಯಾಂಡ್ ನ ಮೋನ್ ಜಿಲ್ಲೆಯ ತಿಜಿತ್ ನಾಗರಿಕ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ಸೇನಾ ಪಡೆಗಳಿಂದ 11 ನಾಗರಿಕರ ಹತ್ಯೆ ನಡೆದಿದ್ದರೂ ಕ್ಷಮೆ ಯಾಚಿಸಿಲ್ಲ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ನಿರುಪದ್ರವಿ ನಾಗರಿಕರ ಹತ್ಯೆ ಪ್ರಕರಣದಲ್ಲಿ ಸಂತ್ರಸ್ಥ ಕುಟುಂಬಗಳಿಗೆ ನ್ಯಾಯ ಸಿಗಬೇಕು. ತಪ್ಪಿತಸ್ಥ ಭದ್ರತಾ ಸಿಬ್ಬಂದಿಗೆ ಶಿಕ್ಷೆ ಆಗುವವರೆಗೂ ಟಿಜಿತ್ ಜನರು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
“ಭದ್ರತಾ ಪಡೆಗಳ ದಾಳಿಯಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಭಾರತ ಸರ್ಕಾರ ಇದುವರೆಗೆ ಕ್ಷಮೆ ಕೇಳಿಲ್ಲ. ಆದರೆ ಗೃಹ ಸಚಿವರು, ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸಂತ್ರಸ್ತರು ಭದ್ರತಾ ಪಡೆಗಳು ಸಿಗ್ನಲ್ ಮಾಡಿದಾಗ ನಿಲ್ಲಿಸಲಿಲ್ಲ ಎಂದು ಸುಳ್ಳು ಹೇಳಿದರು. ಇಂತಹ ಸುಳ್ಳು ಹಬ್ಬಿಸುತ್ತಿರುವವರು ಯಾರು? ಇದನ್ನು ಹೀಗೆ ಮುಂದುವರೆಸಿದರೆ ಮೌನವಾಗಿರಲು ಸಾಧ್ಯವಿಲ್ಲ” ಎಂದು ಪ್ರತಿಭಟನಾಕಾರರು ಮಾಧ್ಯಮಗಳಿಗೆ ತಿಳಿಸಿದರು.
“ಈಶಾನ್ಯ ರಾಜ್ಯಗಳಿಂದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತೇವೆ. ನಮಗೆ ಭದ್ರತಾ ಪಡೆಗಳ ಅಗತ್ಯವಿಲ್ಲ. ನಾವು ಸ್ವತಂತ್ರವಾಗಿ ಬದುಕಲು ಬಯಸುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದರು.
ನಾಗರಿಕ ಹತ್ಯೆಗಳ ನಂತರ, ನಾಗಾಲ್ಯಾಂಡ್, ಮೇಘಾಲಯ ಮತ್ತು ಮಿಜೋರಾಂ ಮುಖ್ಯಮಂತ್ರಿಗಳು ಸಶಸ್ತ್ರ ಪಡೆಗಳ ವಿಶೇಷ ನಿಬಂಧನೆ ಕಾಯ್ದೆಯನ್ನು ಹಿಂತೆಗೆದುಕೊಳ್ಳುವ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿದ್ದಾರೆ ಎಂದು ಹೇಳಿದರು.
“ಭಾರತೀಯ ಸೈನಿಕರು ಅಮಾಯಕರನ್ನು ಕೊಲ್ಲುತ್ತಿದ್ದಾರೆ”, “ನಮಗೆ ನ್ಯಾಯ ಬೇಕು”, “ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯನ್ನು ಹಿಂಪಡೆಯಿರಿ”, “ರಾಜ್ಯ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸಿ” ಎಂಬ ಬ್ಯಾನರ್‌ಗಳನ್ನು ಹಿಡಿದ ಪ್ರತಿಭಟನಾಕಾರರು ಘೋಷಣೆ ಕೂಗಿದರು.