ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿರುವ ಹೋರಾಟಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ದೆಹಲಿಯ ಗಡಿಗಳಲ್ಲಿ ರೈತರು ನವೆಂಬರ್ 26ರಂದು ಬೃಹತ್ ಪ್ರತಿಭಟನೆ ನಡೆಸಿ ವರ್ಷಾಚರಣೆಯ ಸಂಭ್ರಮ ವ್ಯಕ್ತಪಡಿಸಿದರು.
ಐತಿಹಾಸಿಕ ಹೋರಾಟ ಯಶಸ್ವಿಗೊಂಡ ಪ್ರಯುಕ್ತ ರೈತರು ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು. ಇಂತಹ ಸುದೀರ್ಘ ಹೋರಾಟ ನಡೆಸಬೇಕಾಗಿ ಬಂದಿರುವುದು ಒಕ್ಕೂಟ ಸರ್ಕಾರಕ್ಕೆ ಸೂಕ್ಷ್ಮತೆ ಇಲ್ಲದಿರುವುದು ಮತ್ತು ಅದರ ದುರಂಹಕಾರವನ್ನು ತೋರಿಸುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಒಂದು ವರ್ಷದ ಹೋರಾಟದ ಅವಧಿಯಲ್ಲಿ ದೇಶದ ಪ್ರತಿ ರಾಜ್ಯ, ಪ್ರತಿ ಜಿಲ್ಲೆ ಮತ್ತು ಪ್ರತಿ ಹಳ್ಳಿಗಳಲ್ಲೂ ನಡೆದ ಚಳವಳಿಗಳಲ್ಲಿ ಕೋಟಿಗಟ್ಟಲೆ ಜನರು ಭಾಗವಹಿಸಿದರು ಎಂದು ಹೇಳಿದೆ.
ನವೆಂಬರ್ 27ರಂದು ಸಿಂಘು ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಸಭೆ ನಡೆಯಲಿದೆ. ಸಭೆಯಲ್ಲಿ ಮುಂದಿನ ಕ್ರಮದ ಬಗ್ಗೆ ರೈತ ಸಂಘಟನೆಗಳು ತೀರ್ಮಾನ ಕೈಗೊಳ್ಳಲಿವೆ ಎಂದು ಪ್ರಕಟಣೆ ತಿಳಿಸಿದೆ.
ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸಬೇಕು. ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು. ದೆಹಲಿಯ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ರೈತರನ್ನು ದಂಡ ನಿಬಂಧನೆಗಳಿಂದ ಹೊರಗಿಡಬೇಕು. ರೈತರ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಸಚಿವ ಅಜಯ್ ಮಿಶ್ರಾ ತೆನಿ ಅವರನ್ನು ವಜಾಗೊಳಿಸಿ ಬಂಧಿಸಬೇಕು ಎಂದು ರೈತರು ಆಗ್ರಹಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾದ ಕರೆಗೆ ಎಲ್ಲಾ ರಾಜ್ಯಗಳ ರಾಜಧಾನಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆಗಳೊಂದಿಗೆ ರೈತರು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪಂದಿಸಿದ್ದಾರೆ ಎಂದು ತಿಳಿಸಿದೆ.