ಹಂಸಲೇಖ ಅವರು ಕ್ಷಮೆ ಯಾಚಿಸಿದ ನಂತರವೂ ಬಂಧಿಸುವ ಬೆದರಿಕೆ ಹಾಕುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಇಂತಹ ವಿಷಯಗಳ ಕುರಿತು ಪರ-ವಿರೋಧ ಚರ್ಚೆ ನಡೆಯಬೇಕು. ಆದರೆ ಪ್ರಜಾಪ್ರಭುತ್ವದ ಹಕ್ಕುಗಳನ್ನೇ ಕಿತ್ತುಕೊಳ್ಳುವಂತಹ ಪ್ರಯತ್ನ ನಡೆಯುತ್ತಿದೆ. ಇದು ಸರಿಯಲ್ಲ ಎಂದು ನಟ ಚೇತನ್ ಹೇಳಿದರು.
ಯುವಕರ ಸಬಲೀಕರಣದ ಬಗ್ಗೆ ಹಂಸಲೇಖ ಮಾತನಾಡಿದ್ದಾರೆ. ಸಾಹಿತ್ಯ ವಲಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ಚಿತ್ರರಂಗ ಹಂಸಲೇಖ ಅವರ ಪರ ಬೆಂಬಲ ನೀಡುತ್ತಿಲ್ಲ. ಸಸ್ಯಹಾರಿ ಆಗಲೀ ಮತ್ತು ಮಾಂಸಾಹಾರಿಯಾಗಲಿ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ. ರಾಜ್ಯದ ಜನತೆ ಹಂಸಲೇಖರ ಪರವಾಗಿದೆ ಎಂದು ತಿಳಿಸಿದರು.
ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ ನೇತೃತ್ವದಲ್ಲಿ ಪ್ರಜಾಸತ್ತಾತ್ಮಕ ಸಂಘಟನೆಗಳು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ಮಾನಸಿಕ ದಾಳಿ ನಡೆಯುತ್ತಿರುವುದನ್ನು ಖಂಡಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿವಿಗಾಗಿ ಆಗ್ರಹಿಸಿ ಬೆಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕವರೆಗೆ ಮೆರವಣಿಗೆ ನಡೆಸಲಾಗುವುದು.
ಈ ಸಂದರ್ಭದಲ್ಲಿ ಮತೀಯವಾದಿಗಳಿಂದ ಪ್ರತಿಭಟನೆಗೆ ಅಡ್ಡಿಯಾಯಿತು. ಆದರೂ ಠಾಣೆಯ ಬಳಿ ಬಂದು ಮಾತನಾಡಿದ, ಚೇತನ್, ಅದು ಮಾಂಸಾಹಾರಿ ಸಸ್ಯಾಹಾರಿ ಪ್ರಶ್ನೆ ಅಲ್ಲ. ಸಂವಿಧಾನದ ಅಡಿಪಾಯವಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಬೇಕಾಗಿದೆ ಎಂದರು.
ಹಂಸಲೇಖ ಮಾತು ಇಷ್ಟವಾಗದವರು ಕ್ಷಮೆ ಕೇಳಿದ ಬಳಿಕವೂ ಮಾತನಾಡಿದರೆ ಜೈಲಿಗೆ ಹಾಕಿಸಲು ತಮ್ಮ ಅನುಕೂಲಕರ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಇದನ್ನು ಒಪ್ಪಲು ಆಗಲ್ಲ ಎಂದು ಹೇಳಿದ್ದಾರೆ.
ಪ್ರತಿಭಟನಾ ಮೆರವಣಿಗೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವೇಷಧಾರಿ ಎಲ್ಲರ ಗಮನ ಸೆಳೆದರು. ಜೈ ಬೀಮ್, ಜೈ ಭೀಮ್ ಘೋಷಣೆಗಳು ಮೊಳಗಿದವು. ತ್ರಿವರ್ಣ ಧ್ವಜಗಳನ್ನು ಹಿಡಿದ ಪ್ರತಿಭಟನಾಕಾರರು ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿಯಬೇಕು ಎಂದು ಘೋಷಣೆ ಕೂಗಿದರು.
ಗೋ ಬ್ಯಾಕ್ ಬ್ರಾಹ್ಮಣ್ಯ, ಅಂಬೇಡ್ಕರ್ ವಾದ ಚಿರಾಯುವಾಗಲಿ, ನಮ್ಮ ಆಹಾರ ನಮ್ಮ ಹಕ್ಕು, ಬಾಡೋ ನಮ್ ಗಾಡು ಪ್ಲೇಕಾರ್ಡುಗಳನ್ನು ಹಿಡಿದು ಮನುವಾದ ಅಳಿಯಲಿ ಮನುಷ್ಯತ್ವ ಉಳಿಯಲಿ ಎಂದು ಕೂಗಿ ಹೇಳಿದರು.