Sunday, September 8, 2024
Google search engine
Homeಮುಖಪುಟಸೂಜಿಗಲ್ಲಿನಂತೆ ಸೆಳೆಯುತ್ತಿರುವ ಮಮತಾ ಬ್ಯಾನರ್ಜಿ - ಬಲಿಷ್ಠಗೊಳ್ಳುತ್ತಿದೆ ಟಿಎಂಸಿ

ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಮಮತಾ ಬ್ಯಾನರ್ಜಿ – ಬಲಿಷ್ಠಗೊಳ್ಳುತ್ತಿದೆ ಟಿಎಂಸಿ

2021ರ ವರ್ಷದ ಆರಂಭದಲ್ಲಿ ನಡೆದ ಪಶ್ಚಿಮ ಬಂಗಾಳ ಚುನಾವಣೆ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಲ್ಲಾ ಪಕ್ಷದ ನಾಯಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ಬಂದ ಟಿಎಂಸಿ ಅತ್ಯಂತ ಬಲಿಷ್ಠ ಪಕ್ಷವಾಗಿ ಹೊರಹೊಮ್ಮುತ್ತಿದ್ದು ದೇಶದ ಗಮನ ಸೆಳೆದಿರುವುದಂತೂ ಸತ್ಯ. ಮಮತ ಬ್ಯಾನರ್ಜಿ ಅವರು ಕೂಡ ರಾಜಕೀಯ ಕೇಂದ್ರಬಿಂದುವಾಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದಾರೆ.

ಜನವರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸುವೇಂಧು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸೋಲು ಕಂಡಿದ್ದರು. ಆದರೂ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆರು ತಿಂಗಳಲ್ಲಿ ಅವರು ಆಯ್ಕೆಯಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೇಲೆ ಒತ್ತಡ ತಂದು ಉಪಚುನಾವಣೆ ಮುಂದೂಡುವ ಪ್ರಯತ್ನ ನಡೆಸಿತು. ಪಟ್ಟು ಬಿಡದ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಬಹಿರಂಗ ಸಮರ ಸಾರಿ ಚುನಾವಣೆ ನಡೆಯುವಂತೆ ಯಶಸ್ವಿಯಾದರು. ಬಳಿಕ ಬಿಜೆಪಿಯ ನಿರೀಕ್ಷೆಗಳನ್ನು ಮಣ್ಣುಪಾಲು ಮಾಡಿ ಗೆದ್ದು ಮುಖ್ಯಮಂತ್ರಿಯಾಗಿ ಮುಂದುವರಿದಿರುವುದನ್ನು ದೇಶವೇ ಗಮನಿಸುತ್ತಿದೆ.

ಉಪಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಯಿತು. ಈ ಹೊತ್ತಿಗೆ ಬಿಜೆಪಿಗೆ ಹೋಗಿ ಆಯ್ಕೆಯಾಗಿದ್ದ 7ಕ್ಕೂ ಹೆಚ್ಚು ಮಂದಿ ಶಾಸಕರು ಟಿಎಂಸಿಗೆ ಸೇರ್ಪಡೆಯಾದರು. ಇದು ಬಿಜೆಪಿಗೆ ಭಾರೀ ಹೊಡೆತ ಬಿತ್ತು. ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷದಿಂದಲೂ ಕೆಲ ಪ್ರಮುಖ ನಾಯಕರು ಟಿಎಂಸಿಗೆ ಸೇರ್ಪಡೆಗೊಂಡರು. ಗೋವಾ, ಮಹಾರಾಷ್ಟ್ರ ಹೀಗೆ ಎಲ್ಲೆಡೆಯಿಂದ ಟಿಎಂಸಿಗೆ ಬೆಂಬಲ ಸಿಗುತ್ತಿದೆ.

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅತ್ಯಂತ ಕ್ರಿಯಾಶೀಲವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಓಡಾಡುತ್ತಿದ್ದಾರೆ. ದೆಹಲಿ ಮಟ್ಟದಲ್ಲಿ ಬೇರೆ ಬೇರೆ ಪಕ್ಷದ ನಾಯಕರನ್ನು ಭೇಟಿಯಾಗಿ ಮುಂದಿನ ಲೋಕಸಭಾ ಚುನಾವಣೆ ಸಂಬಂಧ ಚರ್ಚಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಶರದ್ ಪವರ್ ಕೂಡ ಮಮತ ಬ್ಯಾನರ್ಜಿ ಕೇಂದ್ರ ನಾಯಕತ್ವವನ್ನು ವಹಿಸಿಕೊಳ್ಳಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಇದೆಲ್ಲವನ್ನೂ ನೋಡಿದರೆ ಟಿಎಂಸಿ ದೇಶದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬ ಸಂದೇಶ ವ್ಯಕ್ತವಾಗುತ್ತಿದೆ.

ಸಧ್ಯದ ಮಟ್ಟಿಗೆ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುತ್ತಿರುವುದು ಮಮತ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ತಂತ್ರಗಳನ್ನು ಬಯಲಿಗೆಳೆಯುತ್ತಾ ದಿಟ್ಟವಾಗಿ ಹೋರಾಡುತ್ತಿರುವ ಮಮತಾ ಬ್ಯಾನರ್ಜಿ ಬಗ್ಗೆ ವಿವಿಧ ಪಕ್ಷದ ನಾಯಕರಿಂದ ಒಲವು ವ್ಯಕ್ತವಾಗುತ್ತಿರುವುದು ಸತ್ಯ ಸಂಗತಿ. ವೈಯಕ್ತಿಕ ವಿಷಯಗಳು ಏನೇ ಇರಲಿ.

ಈ ನಡುವೆ ಇಂದು ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ರಾಷ್ಟ್ರಿಯ ಕಾರ್ಯಕಾರಿ ಸಮಿತಿಯಿಂದ ಕೈಬಿಡುವ ಮೊದಲೂ ಮತ್ತು ನಂತರ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ದನಿಎತ್ತಿ ಆಕ್ರೋಶ ವ್ಯಕ್ತಪಡಿಸಿದ್ದರು. ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ಮೋದಿ ಅವರಿಗೆ ಆಡಳಿತ ನಡೆಸಲು ಬರುವುದಿಲ್ಲ. ಕೆಟ್ಟ ಆರ್ಥಿಕ ವ್ಯವಸ್ಥೆ ಸರಿಪಡಿಸಬೇಕು ಎಂದು ಸರ್ಕಾರದ ವಿರುದ್ಧ ಬಹಿರಂಗ ಸಮರ ಸಾರಿದ್ದರು.

ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಕೈಬಿಟ್ಟ ನಂತರ ಸ್ವಾಮಿ ಟಿಎಂಸಿ ವರಿಷ್ಠರನ್ನು ಹೊಗಳಿದ್ದರು. ಈಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡುತ್ತಿರುವುದು ಕುತೂಹಲ ಮತ್ತು ಚರ್ಚೆಗೆ ವೇದಿಕೆ ಒದಗಿಸಿದೆ.ಈ ಭೇಟಿ ಮುಂದಿನ ರಾಜಕೀಯ ಚಿತ್ರಣಗಳನ್ನು ಬದಲಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೆ.ಈ.ಸಿದ್ದಯ್ಯ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular