ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿ ಮಹೇಶ್ ಜೋಶಿ ವಿರುದ್ಧ ಪ್ರಚಾರ ಮಾಡಿದ ಆರೋಪಕ್ಕಾಗಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸದಸ್ಯ ಸ್ಥಾನದಿಂದ ಮಹೇಂದ್ರ ಕುಮಾರ್ ಅವರನ್ನು ವಜಾ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಬೆಂಬಲ ನೀಡಿರುವ ಮಹೇಶ್ ಜೋಶಿ ವಿರುದ್ಧ ಕೆಲಸ ಮಾಡಿದ್ದೀರಿ. ಅಲ್ಲದೆ ಬೇರೊಬ್ಬ ಅಭ್ಯರ್ಥಿ ಪರವಾಗಿ ತಮ್ಮ ಬೆಂಬಲವನ್ನು ಘೋಷಿಸಿ ಹಲವಾರು ವಾಟ್ಸಪ್ ಗುಂಪುಗಳಿಗೆ ಸಂದೇಶವನ್ನು ಹಾಕಿರುತ್ತೀರಿ ಎಂದು ಮಹೇಂದ್ರಗೌಡ ಅವರಿಗೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ಪತ್ರ ಬರೆದು ತಿಳಿಸಿದ್ದಾರೆ.
ಈ ಸಂಬಂಧ ಪದ್ಮನಾಭ ನಗರ ಮಂಡಲ ಬಿಜೆಪಿ ಘಟಕದ ಅಧ್ಯಕ್ಷ ರವಿಕುಮಾರ್ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಮಹೇಂದ್ರ ಗೌಡ ಅವರನ್ನು ಕಾರ್ಯಕಾರಿಣಿ ಸದಸ್ಯ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ಪತ್ರದಲ್ಲಿ ತಿಳಿಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಇನ್ನು ಮುಂದೆ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಅಧಿಕೃತವಾಗಿ ಭಾಗವಹಿಸುವ ಅವಕಾಶವಿರುವುದಿಲ್ಲ ಎಂದು ಮಹೇಂದ್ರಗೌಡ ಅವರಿಗೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷರು ತಿಳಿಸಿದ್ದಾರೆ.
ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಹೇಶ್ ಜೋಶಿ ಅವರ ವಿರುದ್ಧ ಪ್ರಚಾರ ಮಾಡಿದ್ದರಿಂದ ಪಕ್ಷ ವಿರೋಧಿ ಚಟುವಟಿಕೆ ಹೇಗೆ ಆಗಲು ಸಾಧ್ಯ ಎಂದು ಟೀಕೆಗಳು ವ್ಯಕ್ತವಾಗಿವೆ.