ಕನ್ನಡ ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ಸ್ಥಾನಗಳಿಗೆ ನಿಧಾನಗತಿಯಲ್ಲಿ ಮತದಾನ ನಡೆಯುತ್ತಿದೆ. ಮತದಾರ ಮತಗಟ್ಟೆಗಳಿಗೆ ಆಗಮಿಸುತ್ತಿದ್ದಂತೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳು ಮತ ನೀಡುವಂತೆ ಮನವಿ ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.
ತುಮಕೂರಿನ ಎಂಪ್ರೆಸ್ ಕಾಲೇಜಿನಲ್ಲಿ 4 ಮತಗಟ್ಟೆಗಳನ್ನು ತೆರೆದಿದ್ದು ಪ್ರತಿಯೊಬ್ಬ ಮತದಾರ ಎರಡು ಮತಗಳನ್ನು ಹಾಕಬೇಕು. ಒಂದು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತ್ತೊಂದು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮತ ಚಲಾಯಿಸಬೇಕಾಗಿದೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮತ ಹಾಕಿರುವ ಕೆಂಪು ಮತಪತ್ರವನ್ನು ಒಂದು ಮತಪೆಟ್ಟಿಗೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತ ಹಾಕಿರುವ ಬಿಳಿ ಮತಪತ್ರವನ್ನು ಒಂದು ಮತಪೆಟ್ಟಿಗೆಗೆ ಹಾಕಲಾಗುತ್ತಿದೆ.
ಇಂದು ಬೆಳಗ್ಗೆ 8.30ಕ್ಕೆ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಎಂಪ್ರೆಸ್ ಕಾಲೇಜಿನಲ್ಲಿ ನಡೆಯುತ್ತಿರುವ ಮತಕೇಂದ್ರದ 1ನೇ ಮತಗಟ್ಟೆಗೆ ಭೇಟಿ ನೀಡಿ ಮತದಾನದ ಪ್ರಕ್ರಿಯೆಯನ್ನು ವೀಕ್ಷಿಸಿದರು.
1ನೇ ಮತಗಟ್ಟೆಯ ಹೊರಗೆ ಮಹಿಳಾ ಸಿಬ್ಬಂದಿಯೊಬ್ಬರು ಲ್ಯಾಪ್ ಟಾಪ್ ಹಿಡಿದು ಕುಳಿತಿದ್ದರು. ಅಲ್ಲಿಗೆ ಬಂದ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ‘ಚನ್ನಬಸಪ್ಪ ನೋಡಮ್ಮ’ ಅಂದ್ರು. ಮಹಿಳಾ ಸಿಬ್ಬಂದಿ ಲ್ಯಾಪ್ ಟಾಪ್ ನಲ್ಲಿ ಹೆಸರು ಶೋಧಿಸುವ ಕೆಲಸ ಮಾಡಿದರು. ಆದರೆ ಹೆಸರು ಸಿಗಲೇ ಇಲ್ಲ. ಆಯ್ತು ಎಂದು ಅವರು ಮತಗಟ್ಟೆಗೆ ಭೇಟಿ ನೀಡಿದರು.
ಮತದಾರರ ಹೆಸರು ಕೂಡಲೇ ಸಿಗದಿದ್ದರೆ ಲ್ಯಾಪ್ ಟಾಪ್ ನಲ್ಲಿ ಶೋಧಿಸಿ ಯಾವ ಮತಗಟ್ಟೆ ಎಂದು ಹೇಳಲಾಗುತ್ತಿದೆ. ಆದರೆ ಮತದಾರರೊಬ್ಬರು ತಮ್ಮ ಬಳಿ ಇದ್ದ ಸಾಹಿತ್ಯ ಪರಿಷತ್ತಿನ ಗುರುತಿನ ಪತ್ರವನ್ನು ತೋರಿಸಿ ತನ್ನ ಮತ ಯಾವ ಮತಗಟ್ಟೆಯಲ್ಲಿ ಬರುತ್ತದೆ ಎಂದು ಕೇಳಿದರು. ಆದರೆ ಮಹಿಳಾ ಸಿಬ್ಬಂದಿ ಲ್ಯಾಪ್ ಟಾಪ್ ನಲ್ಲಿ ನೋಡಿ ಸಿಗದೇ ಹೋದಾಗ ‘ಸರ್ ಪೆಂಡಾಲ್ ಹತ್ತಿರ ಹೋಗಿ’ ಎಂದು ಹೇಳಿಕಳಿಸಿದರು.
ತುಮಕೂರು ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಲೇಖಕಿ ಶೈಲಾ ನಾಗರಾಜ್, ಹೋರಾಟಗಾರ ಆರ್.ವಿ.ಪುಟ್ಟಕಾಮಣ್ಣ, ಉಪನ್ಯಾಸಕ ಸಿದ್ದಲಿಂಗಪ್ಪ, ಶಿಕ್ಷಕ ದೇವರಾಜ್ ಸ್ಪರ್ಥಿಸಿದ್ದಾರೆ. ಎರಡು ಪೆಂಡಾಲ್ ಗಳ ಬಳಿ ಮತದಾರರು, ಅಭ್ಯರ್ಥಿಗಳ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದು ಕಂಡುಬಂತು.
ಸಂಜೆ ನಾಲ್ಕು ಗಂಟೆಯವರೆಗೆ ಮತದಾನ ನಡೆಯಲಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಮೇಗೌಡ, ಶಂಕರಗೌಡ ಮಾಲಿಪಾಟೀಲ್, ಚನ್ನೇಗೌಡ, ಮಹೇಶ್ ಜೋಶಿ ಸ್ಪರ್ಥಿಸಿದ್ದಾರೆ.