ಕುಖ್ಯಾತ ನೋಟು ಅಮಾನ್ಯೀಕರಣದ ಐದು ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಉದಾತ್ತ ಘೋಷಣೆಗಳ ಸ್ಥಿತಿ ಏನು ಎಂದು ಪ್ರಶ್ನಿಸಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ನಿಜವಾಗಿಯೂ ನಾವು ಕಡಿಮೆ ನಗದು ಆರ್ಥಿಕತೆ ಆಗಿದ್ದೇವೆ ಎಂದು ಲೇವಡಿ ಮಾಡಿದ್ದಾರೆ.
ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ “ಶ್ರೀ ಮೋದಿಯವರು ಮೊದಲು ನಾವು ನಗದುರಹಿತ ಆರ್ಥಿಕತೆಯಾಗಬೇಕು ಎಂದರು. ಕೆಲವೇ ದಿನಗಳಲ್ಲಿ ಅದು ಅಸಂಬದ್ಧ ಗುರಿ ಎಂದು ಅರಿತುಕೊಂಡು ಕಡಿಮೆ ನಗದು ಆರ್ಥಿಕತೆಗೆ ಮಾರ್ಪಡಿಸಿದರು. ನೋಟು ಅಮಾನ್ಯೀಕರಣದ ಸಮಯದಲ್ಲಿ ಚಲಾವಣೆಯಲ್ಲಿದ್ದ ನಗದು ಸುಮಾರು 18 ಲಕ್ಷ ಕೋಟಿ. ಇಂದು ಅದು 28.5 ಲಕ್ಷ ಕೋಟಿ” ಎಂದು ಟ್ವೀಟ್ ಮಾಡಿದ್ದಾರೆ.
“ನಿರುದ್ಯೋಗ ಹೆಚ್ಚಳ ಮತ್ತು ಹಣದುಬ್ಬರಕ್ಕೆ ಧನ್ಯವಾದಗಳು! ಬಡವರು ಮತ್ತು ಕೆಳ ಮಧ್ಯಮವರ್ಗದವರು ಕಡಿಮೆ ಹಣ ಗಳಿಸುತ್ತಾರೆ. ಕಡಿಮೆ ಖರ್ಚು ಮಾಡುತ್ತಾರೆ. ನಾವು ನಿಜವಾಗಿಯೂ ಕಡಿಮೆ ನಗದು ಆರ್ಥಿಕತೆ ಆಗಿದ್ದೇವೆ” ಎಂದು ಲೇವಡಿ ಮಾಡಿದ್ದಾರೆ.
“ನೋಟು ಅಮಾನ್ಯೀಕರಣದ ನಂತರ ಐದು ವರ್ಷಗಳ ನಂತರ ಹೆಚ್ಚುಹೆಚ್ಚು ಜನರು ನಗದುರಹಿತ ಪಾವತಿ ವಿಧಾನ ಅಳವಡಿಸಿ ಕೊಳ್ಳುವುದರೊಂದಿಗೆ ಡಿಜಿಟಲ್ ಪಾವತಿಗಳು ಹೆಚ್ಚುತ್ತಿವೆ. ಆದರೂ ಸಹ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳು ನಿಧಾನ ಗತಿಯಲ್ಲಿ ಏರಿಕೆಯಾಗುತ್ತಲೇ ಇವೆ” ಎಂದು ಗೇಲಿ ಮಾಡಿದ್ದಾರೆ.
“ಕೇರಳ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸಂಗ್ರಹಿಸಿರುವ ತೆರಿಗೆಗಳ ಬಗ್ಗೆ ಕೆಲವು ಅಂಕಿಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಮರುಪರಿಶೀಲನೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.
“2020-21ರಲ್ಲಿ 3,72,000 ಕೋಟಿ ರೂಗಳನ್ನು ಅಬಕಾರಿ ಸುಂಕ, ಸೆಸ್ ಮತ್ತು ಹೆಚ್ಚುವರಿ ಅಬಕಾರಿ ಸುಂಕವಾಗಿ ಸಂಗ್ರಹಿಸಲಾಗಿದೆ ಎಂದು ಅಂಕಿಅಂಶಗಳು ಬಹಿರಂಗಪಡಿಸುತ್ತವೆ. ಈ ಬೃಹತ್ ಮೊತ್ತದಲ್ಲಿ 18,000 ಕೋಟಿ ರೂಗಳನ್ನು ಮೂಲ ಅಬಕಾರಿ ಸುಂಕವಾಗಿ ಸಂಗ್ರಹಿಸಲಾಗಿದೆ. ಆ ಮೊತ್ತದ 41ರಷ್ಟುನ್ನು ಹಂಚಿಕೊಳ್ಳಲಾಗಿದೆ. ಉಳಿದ 3,54,000 ಕೋಟಿ ರೂಗಳು ಕೇಂದ್ರಕ್ಕೆ ಹೊಗಿದೆ. ಇದು ಮೋದಿ ಸರ್ಕಾರ ಅನುಸರಿಸುತ್ತಿರುವ ಸಹಕಾರಿ ಫೆಡರಲಿಸಂ ಮಾದರಿ” ವ್ಯಂಗ್ಯ ಮಾಡಿದ್ದಾರೆ.