ಬಿಟ್ ಕಾಯಿನ್ ಪ್ರಕರಣದ ಕುರಿತು ಪಕ್ಷದ ನಿರ್ಧಾರವನ್ನು ನಾನು ಈಗಾಗಲೇ ಹೇಳಿದ್ದೇನೆ. ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಮೊದಲು ಸಮಗ್ರ ಮಾಹಿತಿ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಬಿಟ್ ಕಾಯಿನ್ ಪ್ರಕರಣದಲ್ಲಿ ಮುಖ್ಯಮಂತ್ರಿ ತಲೆದಂಡವಾಗುತ್ತದೆ ಎಂಬ ಶಾಸಕ ಪ್ರಿಯಾಂಕ ಖರ್ಗೆ ಹೇಳಿಕೆ ಸಂಬಂಧ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ತನಿಖೆ ಹೇಗೆ ನಡೆಯುತ್ತಿದೆ. ಸಿಕ್ಕಿರುವ ಮಾಹಿತಿ, ಏನೆಲ್ಲಾ ಸೀಜ್ ಮಾಡಲಾಗಿದೆ. ಸೀಜ್ ಮಾಡಿಕೊಂಡಿರುವ ಬಿಟ್ ಕಾಯಿನ್ ಯಾರ ವಾಲೆಟ್ ನಲ್ಲಿದೆ? ಹಗರಣದಲ್ಲಿ ಯಾರ ಹೆಸರು ಕೇಳಿಬಂದಿದೆ? ಇಡಿ ತನಿಖೆಗೆ ಪ್ರಧಾನಿಗೆ ಪತ್ರ ಬರೆದವರು ಯಾರು? ಪೊಲೀಸ್ ಅಧಿಕಾರಿಗಳ ಹೇಳಿಕೆಗಳು ಏನು? ಎಷ್ಟು ಎಫ್ಐಆರ್ ದಾಖಲಾಗಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಕೇಳಿದರು.
ಯಾವುದೋ ಗಲಾಟೆಯಲ್ಲಿ ಕಾಂಗ್ರೆಸ್ ನಾಯಕರ ಜೊತೆ ಆತ ಗುರುತಿಸಿಕೊಂಡಿದ್ದ ಎಂದು ಹೇಳುತ್ತಾರೆ. ಆ ಮಾಹಿತಿ ಏನು? ಮಾಧ್ಯಮಗಳು ಹೆಸರು ಹೇಳದೆಯೇ ವರದಿ ಮಾಡುತ್ತಿವೆ. ಹಾಗಾಗಿ ನಾನು ಬೇರೆ ನಾಯಕರ ವೈಯಕ್ತಿಕ ಅಭಿಪ್ರಾಯ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಾಯಕರ ಮಗನ ವಿಚಾರ ಮಾತನಾಡುವುದಾದರೆ ಆತ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಬಂಧಿಸಲಿ. ಯಾವ ಆಧಾರದ ಮೇಲೆ ಕಾಂಗ್ರೆಸ್ ನಾಯಕರ ಮಕ್ಕಳ ಹೆಸರು ತರುತ್ತಿದ್ದಾರೆ. ತಪ್ಪು ಮಾಡಿದವರನ್ನು ಸುಮ್ಮನೆ ಬಿಡುವುದೇಕೆ? ಪ್ರಕರಣದಲ್ಲಿ ಯಾರ ಹೆಸರುಗಳಿವೆ ಎಂಬ ಮಾಹಿತಿ ಗೃಹ ಸಚಿವರಿಗೆ ಗೊತ್ತಿದ್ದರೆ ಆರೋಪಿಗಳನ್ನು ರಕ್ಷಣೆ ಮಾಡುತ್ತಿರುವುದೇಕೆ? ಎಲ್ಲಾ ಮಾಹಿತಿ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಹೆಸರು ಕೇಳಿ ಬಂದಿದೆ ಎಂಬ ವಿಷಯ ನನಗೆ ಗೊತ್ತಿಲ್ಲ. ಯಾರ ಮಕ್ಕಳ ಹೆಸರು ಕೇಳಿಬರುತ್ತದೆಯೋ ಬರಲಿ. ನಾನು ದಾಖಲೆ ಇಲ್ಲದೆ ಬೇರೆಯವರಂತೆ ಬೇಕಾಬಿಟ್ಟಿ ಮಾತನಾಡುವುದಿಲ್ಲ. ಹಗರಣದ ಲೆಕ್ಕ ಹಾಕಲು ನನಗೆ ಸಾಧ್ಯವಾಗುತ್ತಿಲ್ಲ. ಅಂಕಿಅಂಶ ನೋಡಿದರೆ ಬೆಚ್ಚಿ ಬೀಳುವಂತೆ ಆಗುತ್ತದೆ ಎಂದರು.


