ಹಿಮಾಚಲ ಪ್ರದೇಶದಂತಹ ಆಡಳಿತಾರೂಢ ರಾಜ್ಯಗಳಲ್ಲಿ ಬಿಜೆಪಿ ಉಪಚುನಾವಣೆಯಲ್ಲಿ ಸೋತ ನಂತರ ಒಕ್ಕೂಟ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಲೋಕಸಭೆಯ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್ ಟ್ವೀಟ್ ಮಾಡಿ “ಪೆಟ್ರೋ-ಡೀಸೆಲ್ ಮೇಲಿನ ಸುಂಕವನ್ನು ಹೆಚ್ಚಿಸಿ ಉಚಿತ ಲಸಿಕೆಗಳನ್ನು ನೀಡಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ಹೇಳಿಕೊಂಡ ಬಳಿಕ ತನ್ನ ಬೂಟಾಟಿಕೆ ಮುಚ್ಚಿಕೊಳ್ಳಲು ಬೆಲೆಗಳನ್ನು ಭಾಗಶಃ ಇಳಿಕೆ ಮಾಡಿದೆ” ಎಂದು ದೂರಿದ್ದಾರೆ.
“ರಾಹುಲ್ ಗಾಂಧಿ ಹಣದುಬಬ್ಬರದ ಬಗ್ಗೆ ಸರ್ಕಾರದ ವಿರುದ್ಧ ದಾಳಿ ನಡೆಸಿದ ಒಂದು ದಿನದ ಬಳಿಕ ದೇಶದ ಜನರಿಗೆ ಸಣ್ಣದೊಂದು ಪರಿಹಾರ ದೊರೆತಿದೆ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದು “ಟ್ಯಾಕ್ಸ್ ಪರಾವಲಂಬಿ ಮೋದಿ ಸರ್ಕಾರಕ್ಕೆ ಸತ್ಯದ ಕನ್ನಡಿ ತೋರಿಸಿದ್ದಕ್ಕಾಗಿ ಜನರಿಗೆ ಅಭಿನಂದನೆಗಳು” ಎಂದು ಹೇಳಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ 14 ವಿಧಾನಸಭೆಗಳಿಗೆ ನಡೆದ ಉಪಚುನಾವಣೆ ಮತ್ತು 2 ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡ ಬಳಿಕ ಪೆಟ್ರೊಲ್ ಡೀಸೆಲ್ ಬೆಲೆಯನ್ನು 5 ರೂ ಮತ್ತು 10ರೂಗಳಷ್ಟ ಕಡಿಮೆ ಮಾಡಿದೆ. ಮೋದಿ ಸರ್ಕಾರ ದೀಪಾವಳಿ ಉಡುಗೊರೆಯಾಗಿ ಕೊಟ್ಟಿದೆ ಎಂದು ಟಾಮ್-ಟಾಮ್ ಮಾಡಲಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.
ಮೇ 2014ರಲ್ಲಿ ಪೆಟ್ರೋಲ್ ಬೆಲೆ 71.41 ರೂ ಇತ್ತು. ಡೀಸೆಲ್ ಬೆಲೆ 55.49 ರೂ ಇತ್ತು. ಈ ಸಂದರ್ಭದಲ್ಲಿ ಬ್ಯಾರಲ್ ಕಚ್ಚಾ ತೈಲ ಬೆಲೆ 105.71 ಡಾಲರ್ ಆಗಿತ್ತು.
“ಕಚ್ಚಾ ತೈಲವು ಬ್ಯಾರಲ್ ಗೆ 82 ಡಾಲರ್ ಇದೆ. 2014ರ ವರ್ಷಕ್ಕೆ ಬೆಲೆಗಳು ಯಾವಾಗ ಸಮನಾಗಿರುತ್ತದೆ ಎಂದು ಪ್ರಶ್ನಿಸಿದ್ದಾರೆ.
ಈಗಲೂ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 28 ಮತ್ತು ಡೀಸೆಲ್ ಮೇಲಿನ ಸುಂಕ 22 ರೂ ಇದೆ ಎಂದು ಚಿದಂಬರಂ ಹೇಳಿದ್ದಾರೆ.


